
ಕುಂದಗೋಳ: ಪಟ್ಟಣ ಪಂಚಾಯಿತಿ ಆಶ್ರಯ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಕಾನೂನುಬಾಹಿರವಾಗಿ ನಡೆದಿರುವ ಬಗ್ಗೆ ಪಪಂ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಹಾಲಿ ಉಪಾಧ್ಯಕ್ಷರು ಮತ್ತು ಸದಸ್ಯರ ಪತ್ನಿಯರಿಗೆ ನಿವೇಶನ ನೀಡಲಾಗಿದೆ ಎಂಬ ಆರೋಪ ಸದಸ್ಯರಿಂದ ಕೇಳಿಬಂದಿದ್ದು, ಈ ಕುರಿತು ತಕ್ಷಣ ತನಿಖೆ ನಡೆಸಬೇಕೆಂದು ಆಗ್ರಹಿಸಲಾಯಿತು.
ನಿಯಮ ಮೀರಿ ನಿವೇಶನ ಹಂಚಿಕೆ ಆರೋಪ
ವಿಷಯ ಪ್ರಸ್ತಾಪಿಸಿದ ಸದಸ್ಯ ಗಣೇಶ ಕೋಕಾಟೆ ಅವರು, “ಬಡವರಿಗೆ ಮೀಸಲಾದ ಆಶ್ರಯ ಯೋಜನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮನೆ ಇಲ್ಲದ ಕಡುಬಡವರು ಹಾಗೂ ನಿರಾಶ್ರಿತರನ್ನು ಕಡೆಗಣಿಸಿ, ಜನಪ್ರತಿನಿಧಿಗಳ ಪತ್ನಿಯರಿಗೆ ನಿವೇಶನ ನೀಡಲಾಗಿದೆ. ಉಪಾಧ್ಯಕ್ಷರ ಪತ್ನಿ ಹಾಗೂ ಸದಸ್ಯರೊಬ್ಬರ ಪತ್ನಿ ಹೆಸರಿನಲ್ಲಿ ನಿವೇಶನ ನೀಡಿರುವುದು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನಿಸಿದರು.
ಫಲಾನುಭವಿಗಳ ಪಟ್ಟಿಯನ್ನು ಶಾಸಕರ ಅಧ್ಯಕ್ಷತೆಯ ಆಶ್ರಯ ಸಮಿತಿಯಲ್ಲಿ ಅನುಮೋದಿಸಲಾಗಿದ್ದರೂ, ಅಧಿಕಾರಿಗಳು ಸಮಿತಿಯ ಗಮನಕ್ಕೆ ತಾರದೆ ಹೆಸರುಗಳನ್ನು ಸೇರಿಸಿದ್ದಾರೆಯೇ ಅಥವಾ ಸಮಿತಿಯೇ ನಿಯಮಬಾಹಿರವಾಗಿ ಅನುಮೋದನೆ ನೀಡಿದೆಯೇ ಎಂಬುದರ ಕುರಿತು ತನಿಖೆಯಾಗಬೇಕು. ತಕ್ಷಣವೇ ಅನರ್ಹ ಫಲಾನುಭವಿಗಳ ಹೆಸರನ್ನು ಕೈಬಿಡಬೇಕು ಎಂದು ಕೋಕಾಟೆ ಆಗ್ರಹಿಸಿದರು. ಈ ಆರೋಪಕ್ಕೆ ಮಹಿಳಾ ಸದಸ್ಯೆಯರೂ ಬೆಂಬಲ ವ್ಯಕ್ತಪಡಿಸಿ, ತಮ್ಮ ಮನೆಯವರಿಗೂ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ಅವರು, “ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ಶಾಸಕರ ನೇತೃತ್ವದ ಸಮಿತಿಯಲ್ಲಿ ಅನುಮೋದನೆಯಾಗಿದೆ. ಇದರಲ್ಲಿ ನಮ್ಮ ಪಾತ್ರ ಸೀಮಿತ” ಎಂದು ಸ್ಪಷ್ಟಪಡಿಸಿದರು.
ಒತ್ತುವರಿ ತೆರವಿಗೆ ಹಿಂಬ್ರೇಕ್: ಅಧಿಕಾರಿಗಳ ತರಾಟೆ
ಸದಸ್ಯ ವಾಗೀಶ ಗಂಗಾಯಿ ಮಾತನಾಡಿ, “ಐದು ತಿಂಗಳ ಹಿಂದೆ ಒತ್ತುವರಿ ತೆರವುಗೊಳಿಸಲು ಪಟ್ಟಣದಲ್ಲಿನ ಅನಧಿಕೃತ ಕಟ್ಟಡಗಳು ಮತ್ತು ಒತ್ತುವರಿ ಜಾಗಗಳನ್ನು ಏಕೆ ತೆರವುಗೊಳಿಸಿಲ್ಲ? ಹೈಕೋರ್ಟ್ ಆದೇಶವಿದ್ದರೂ ಕ್ರಮ ಕೈಗೊಂಡಿಲ್ಲ” ಎಂದು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ಶೀಘ್ರದಲ್ಲೇ ಸರ್ವೇ ನಡೆಸಿ ತೆರವು ಕಾರ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಮಗಾರಿ ಬಿಲ್‌ಗಳಲ್ಲಿ ಲೋಪ: ತನಿಖೆಗೆ ಆದೇಶ
ಸದಸ್ಯ ಮಲ್ಲಿಕಾರ್ಜುನ ಕಿರೆಸೂರ ಅವರು ಪಪಂ ಕಾಮಗಾರಿಗಳ ಬಿಲ್‌ಗಳ ಕುರಿತು ಪ್ರಶ್ನೆ ಎತ್ತಿ, “ಟಿವಿಎಸ್ ಶೋರೂಂ ಎದುರು ಪೈಪ್‌ಲೈನ್ ದುರಸ್ತಿಗೆ ರೂ.90 ಸಾವಿರ, ಬೋರ್‌ವೆಲ್ ರಿಪೇರಿಗೆ ಎರಡು ಬಾರಿ ಬೇರೆ ಬೇರೆ ಮೊತ್ತದಲ್ಲಿ ಬಿಲ್, ಇಂದಿರಾ ಕ್ಯಾಂಟೀನ್ ಪೈಪ್ ಲೈನ್ ದುರಸ್ತಿಗೆ ಪುನಃ ಸಾವಿರಾರು ರೂ. ಬಿಲ್ ತೆಗೆಯಲಾಗಿದೆ. ಇದಕ್ಕೆ ಯಾವುದೇ ನಿಯಮಗಳಿಲ್ಲವೇ? ಪರಿಶೀಲನೆ ಮಾಡಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, “ಈ ಆರೋಪಕ್ಕೆ ಸಂಬಂಧಿಸಿದ ಸಿಬ್ಬಂದಿ ರಜೆಯಲ್ಲಿದ್ದಾರೆ. ರಜೆ ಮುಗಿದ ಬಳಿಕ ವಿಚಾರಣೆ ನಡೆಸಲಾಗುವುದು. ಲೋಪದೋಷ ಕಂಡುಬಂದರೆ ಅವರನ್ನು ವಜಾ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಒತ್ತುವರಿ ತೆರವು ಕಾರ್ಯಕ್ಕೆ ತೋಟಗಾರಿಕೆ ಇಲಾಖೆಗೆ ಏಳು ದಿನಗಳ ಗಡುವು ನೀಡಲಾಯಿತು.
ನಾಗರಿಕ ಸಮಸ್ಯೆ ಬಗೆಹರಿಸಲು ಸೂಚನೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ಯಾಮಸುಂದರ ದೇಸಾಯಿ ಅವರು, ಪಟ್ಟಣದಲ್ಲಿನ ಕೋರ್ಟ್ ಪಕ್ಕದ ರಸ್ತೆ ದುರಸ್ತಿ, ನೀರಿನ ಸಮಸ್ಯೆ, ಬೀದಿ ದೀಪಗಳ ದೋಷ, ರಸ್ತೆ ಸುರಕ್ಷತಾ ಬೋಲ್ಡರ್ ಅಳವಡಿಕೆ ಸೇರಿದಂತೆ ಎಲ್ಲಾ ರೀತಿಯ ನಾಗರಿಕ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸದಸ್ಯರಾದ ಪ್ರವೀಣ ಬಡ್ಡಿ ಅವರು ಮಸಾರಿ ಪ್ರಾಂಗ್ಸ್‌ನಲ್ಲಿ ರಸ್ತೆ ದುರಸ್ತಿಗೆ ಮನವಿ ಮಾಡಿದರು. ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಸಾಬ ಶಿರೂರ, ಸದಸ್ಯರಾದ ದಿಲೀಪ್ ಕಲಾಲ, ಹನುಮಂತಪ್ಪ ಮೇಲಿನಮನಿ, ಹನುಮಂತಪ್ಪ ರಣತೂರ, ಬಸುರಾಜ ತಳವಾರ, ಸುನೀತಾ ಪಾಟೀಲ, ಭುವನೇಶ್ವರಿ ಕೌಲಗಿ, ನೀಲಮ್ಮ ಕುಂದಗೋಳ, ಕಮಲಾಕ್ಷಿ, ಬಸಮ ಕಟಗಿ, ಸರದಾ ಮುಲ್ಲಾ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

