
ಧಾರವಾಡ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದ ಪರಿಣಾಮವಾಗಿ ನರಗುಂದ-ನವಲಗುಂದ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಸಂಪರ್ಕ ಕಲ್ಪಿಸುವ, ನವಲಗುಂದ ತಾಲೂಕಿನ ಅರಭಾವಿ-ಚಳ್ಳಿಕೇರಿ ರಾಜ್ಯ ಹೆದ್ದಾರಿ-45ರಲ್ಲಿನ ತಡಹಾಳ ಗ್ರಾಮದ ಬಳಿಯ ಸೇತುವೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚಿನ ಅನಾಹುತಗಳಾಗದಂತೆ ತಡೆಯಲು, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಅಧೀಕ್ಷಕರ ವರದಿ ಆಧರಿಸಿ, ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಸಂಚಾರಕ್ಕೆ ಬದಲಿ ವ್ಯವಸ್ಥೆ
ಸೇತುವೆ ಕುಸಿತದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ, ಜಿಲ್ಲಾಡಳಿತವು ಬದಲಿ ಮಾರ್ಗವನ್ನು ಘೋಷಿಸಿದೆ. ವಾಹನ ಸವಾರರು ಇನ್ನು ಮುಂದೆ ನರಗುಂದ-ನವಲಗುಂದ ರಾಷ್ಟ್ರೀಯ ಹೆದ್ದಾರಿ-218, ನವಲಗುಂದ-ಶಲವಡಿ ರಾಜ್ಯ ಹೆದ್ದಾರಿ-56 ಮೂಲಕ ಸಂಚರಿಸಿ, ಬಳಿಕ ಅರಭಾವಿ-ಚಳ್ಳಿಕೇರಿ ರಾಜ್ಯ ಹೆದ್ದಾರಿ-45ರ ಶಲವಡಿ ಗ್ರಾಮದ ಮೂಲಕ ಸಂಚರಿಸಲು ಘೋಷಿಸಿದೆ.
ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ, ಕುಸಿದಿರುವ ಸ್ಥಳದ ಸುತ್ತಲು ಬ್ಯಾರಿಕೇಡ್‌ಗಳನ್ನು ಅಳವಡಿಸಲು ಮತ್ತು 24 ಗಂಟೆಯೂ ಕರ್ತವ್ಯ ನಿರ್ವಹಿಸಲು ಪೊಲೀಸ್ ಪೇದೆಯನ್ನು ನೇಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

