ಧಾರವಾಡ ಗರಗ ಬೈಪಾಸ್‌ ರಸ್ತೆಯಲ್ಲಿ ಭೀಕರ ಅಪಘಾತ: ಎರಡು ಲಾರಿ ಡಿಕ್ಕಿ, ನಾಲ್ವರಿಗೆ ಗಾಯ

Spread the love

ಧಾರವಾಡ :ತಾಲೂಕಿನ ನರೇಂದ್ರ ಬಳಿಯ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ.

ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಲಾರಿಗೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿ ತೀವ್ರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿಗಳ ಮುಂಭಾಗ ನುಜ್ಜುಗುಜ್ಜಾಗಿದ್ದು, ಒಟ್ಟು ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಒಂದು ಲಾರಿಯ ಚಾಲಕ ತೀವ್ರವಾಗಿ ಜಖಂಗೊಂಡಿರುವ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ. ಸ್ಥಳೀಯರ ಮತ್ತು ಪೊಲೀಸರ ಸಹಕಾರದಿಂದ ಆತನನ್ನು ಹೊರತೆಗೆದು, ಉಳಿದ ಗಾಯಾಳುಗಳೊಂದಿಗೆ ತಕ್ಷಣವೇ ಧಾರವಾಡ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಧಾರವಾಡ ಗ್ರಾಮೀಣ ಠಾಣೆ ಸಿಪಿಐ ಎಸ್.ಎಸ್.ಕಮತಗಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಲಾರಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಘಟನೆ ಧಾರವಾಡ ಗ್ರಾಮೀಣ ಪೋಲಿಸ್ ‌ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Leave a Reply

Your email address will not be published. Required fields are marked *