
ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಗೆ ಬರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರ ಮೊಬೈಲ್ ನಂಬರ್ಗಳನ್ನು ಪಡೆದು ನಿರಂತರವಾಗಿ ಕಾಟ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆಯರು ಮತ್ತು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಸಹ ಈತನಿಗೆ ಧರ್ಮದೇಟು ನೀಡಿರುವುದು ಬೆಳಕಿಗೆ ಬಂದಿದೆ.
ಕಳೆದ ಮೂರು ತಿಂಗಳಿಂದ ಈ ವ್ಯಕ್ತಿ ಪ್ರತಿದಿನ ಸಂಜೆ 8 ಗಂಟೆ ಸುಮಾರಿಗೆ ತನ್ನ ಬೈಕ್ನಲ್ಲಿ ಕಿಮ್ಸ್ ಆಸ್ಪತ್ರೆಯ ಮುಖ್ಯ ಗೇಟ್ ಬಳಿ ಬಂದು ನಿಲ್ಲುತ್ತಿದ್ದ. ಆಸ್ಪತ್ರೆಗೆ ಹೋಗುವ ಮಹಿಳೆಯರನ್ನು ನೋಡಿ, “ಆಸ್ಪತ್ರೆಯ ಒಳಗೆ ಡ್ರಾಪ್ ಮಾಡುತ್ತೇನೆ” ಎಂದು ಹೇಳಿ ಅವರ ಮೊಬೈಲ್ ನಂಬರ್ ಪಡೆದು ಕಿರುಕುಳ ನೀಡುತ್ತಿದ್ದ. ಹಲವು ಮಹಿಳೆಯರು ಈತನಿಂದ ತಮಗೆ ಆದ ತೊಂದರೆಯನ್ನು ಆಸ್ಪತ್ರೆ ಸಿಬ್ಬಂದಿ ಬಳಿ ಹೇಳಿಕೊಂಡಿದ್ದರು. ಸಿಬ್ಬಂದಿ ಈತನ ಚಲನವಲನದ ಮೇಲೆ ನಿಗಾ ಇಟ್ಟಿದ್ದರು.
ಇದೇ ರೀತಿ ಇಂದು (ಮಂಗಳವಾರ) ದಂದು ಕೂಡ ತನ್ನ ಹಳೆಯ ಚಾಳಿಯನ್ನು ಮುಂದುವರೆಸುತ್ತಿದ್ದಾಗ, ಆತನನ್ನು ಮಹಿಳೆಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆಕ್ರೋಶಗೊಂಡ ಮಹಿಳೆಯರು ಮತ್ತು ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕರ ಥಳಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಾಮುಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗದೆ.

