

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಸೆ:22 ರಂದು ಸಂಜೆ 5:30ಕ್ಕೆ ಚೆನ್ನಬಸವ್ವ ಸಾದರ ಅವರ ಸ್ಮರಣಾರ್ಥವಾಗಿ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಈ ವಿನೂತನ ಕಾರ್ಯಕ್ರಮಕ್ಕೆ “ಮಿತಸಮಯ ಮಹಿಳಾ ಕಥಾಸಂಚಯ” ಎಂದು ಹೆಸರಿಡಲಾಗಿದ್ದು, ಹತ್ತು ಜನ ಪ್ರತಿಭಾವಂತ ಮಹಿಳಾ ಕಥೆಗಾರ್ತಿಯರು ತಾವು ಬರೆದ ಹತ್ತು ಹೊಸ ಕಥೆಗಳನ್ನು ತಲಾ ಹತ್ತು ನಿಮಿಷಗಳ ಅವಧಿಯಲ್ಲಿ ವಾಚನ ಮಾಡಲಿದ್ದಾರೆ.
ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಂಗಳೂರಿನ ಆಕಾಶವಾಣಿಯ ವಿಶ್ರಾಂತ ನಿರ್ದೇಶಕರಾದ ಡಾ. ಬಸವರಾಜ ಸಾದರ ಅವರು ಆಶಯ ನುಡಿಗಳನ್ನಾಡಲಿದ್ದು, ಸಂಘದ ಉಪಾಧ್ಯಕ್ಷರಾದ ಡಾ. ಸಂಜೀವ ಕುಲಕರ್ಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಂಧ್ಯಾ ಹೊನಗುಂಟಿಕರ, ಡಾ. ವಿನಯಾ ಒಕ್ಕುಂದ, ಶ್ವೇತಾ ನರಗುಂದ, ಡಾ. ಮೈತೇಯಿಣಿ ಗದಿಗೆಪ್ಪಗೌಡರ, ನಿರ್ಮಲಾ ಶೆಟ್ಟರ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಶೋಭಾ ಹೆಗಡೆ, ಡಾ. ಪ್ರಜ್ಞಾ ಮತ್ತಿಹಳ್ಳಿ, ರೇಣುಕಾ ಕೋಡಗುಂಟಿ ಮತ್ತು ಸುನಂದಾ ಕಡಮೆ ಕಥಾ ವಾಚನ ಮಾಡಲಿದ್ದಾರೆ. ಈ ಮೂಲಕ ಮಹಿಳಾ ಸಾಹಿತ್ಯದ ಹೊಸ ಆಯಾಮಗಳನ್ನು ಅನಾವರಣಗೊಳಿಸುವ ಪ್ರಯತ್ನ ಇದಾಗಿದೆ.
ಸಾಹಿತ್ಯಾಸಕ್ತರು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

