
ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಜೈ ಶ್ರೀರಾಮ ಗರಡಿ ಮನೆ ಗೆಳೆಯರ ಬಳಗದ ವತಿಯಿಂದ ಸ್ಥಾಪಿಸಿದ್ದ ಗಣೇಶ ಮೂರ್ತಿಯನ್ನು 25 ದಿನಗಳ ವಿಶಿಷ್ಟ ಕಾರ್ಯಕ್ರಮಗಳ ನಂತರ ಭಕ್ತಿ ಮತ್ತು ಸಂಭ್ರಮದಿಂದ ವಿಸರ್ಜಿಸಲಾಯಿತು. ಯುವಕರು ಆಧುನಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಡಿಜೆ ಬಳಸದೆ, ಕೋಲಾಟದಂತಹ ಜನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದರು.
ಗಣೇಶೋತ್ಸವದ ಈ 25 ದಿನಗಳಲ್ಲಿ, ಗೆಳೆಯರ ಬಳಗವು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಿತ್ತು. ಪ್ರತೀ ವರ್ಷದಂತೆ ಈ ವರ್ಷವೂ “ಸಂಗ್ರಾಣಿ ಕಲ್ಲು ಎತ್ತುವುದು,” “ಯುವಕರಿಂದ ಚಕ್ಕಡಿ ಎಳೆಯುವುದು,” ಮತ್ತು “ಎತ್ತುಗಳಿಂದ ಖಾಲಿ ಘಾಡಾ ಓಡಿಸುವ” ಸ್ಪರ್ಧೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಈ ಸ್ಪರ್ಧೆಗಳಲ್ಲಿ ಗ್ರಾಮದ ಯುವಕರು ಮತ್ತು ರೈತರು ಉತ್ಸಾಹದಿಂದ ಭಾಗವಹಿಸಿದ್ದರು.
ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಸದ್ದಿನ ಬದಲಿಗೆ, ಗ್ರಾಮೀಣ ಸೊಗಡಿನ ಕೋಲಾಟ ಪ್ರದರ್ಶನಗೊಂಡು ಸೇರಿದ್ದ ಎಲ್ಲರ ಮನಸ್ಸಿಗೆ ಮುದ ನೀಡಿತು. ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಈ ವಿಶಿಷ್ಟ ಆಚರಣೆಯನ್ನು ಕಣ್ತುಂಬಿಕೊಂಡರು. ಇಡೀ ಕಾರ್ಯಕ್ರಮವು ಸಾಮೂಹಿಕ ಭೋಜನದೊಂದಿಗೆ (ಮಹಾ ದಾಸೋಹ) ಮುಕ್ತಾಯಗೊಂಡಿತು.
ಹಿರೇಹೊನ್ನಿಹಳ್ಳಿ ಗ್ರಾಮದ ಯುವಕರ ಈ ಪ್ರಯತ್ನವು, ಹಬ್ಬದ ಸಂಭ್ರಮದ ಜೊತೆಗೆ ಗ್ರಾಮದ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸುವ ವಿಶಿಷ್ಟ ಹೆಜ್ಜೆಯಾಗಿದೆ. ಈ ಮೂಲಕ ಗಣೇಶ ವಿಸರ್ಜನೆಯು ಕೇವಲ ಧಾರ್ಮಿಕ ಆಚರಣೆಯಾಗದೆ, ಗ್ರಾಮೀಣ ಸಂಸ್ಕೃತಿಯ ಅನಾವರಣದ ವೇದಿಕೆಯಾಗಿ ಪರಿಣಮಿಸಿತ್ತು.

