

ಕುಂದಗೋಳ: ಮಾದಕ ವ್ಯಸನಗಳಿಂದ ದೂರವಿರುವ ನಿಟ್ಟಿನಲ್ಲಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ವತಿಯಿಂದ ‘ನಶಾ ಮುಕ್ತ ಭಾರತ’ ಪರಿಕಲ್ಪನೆಯಡಿ ಆಯೋಜಿಸಿದ್ದ ‘ನಮೋ ಯುವ ಓಟ’ ಮ್ಯಾರಥಾನ್ಗೆ ಶಾಸಕ ಎಂ.ಆರ್.ಪಾಟೀಲ್ ಅವರು ಚಾಲನೆ ನೀಡಿದರು. ಶಿವಾನಂದ ವಿದ್ಯಾಪೀಠದಿಂದ ಆರಂಭವಾದ ಈ ಬೃಹತ್ ಓಟವು ಅತ್ಯಂತ ಯಶಸ್ವಿಯಾಗಿ ನಡೆಯಿತು.
ಚಾಲನೆ ನೀಡಿ ಮಾತನಾಡಿದ ಶಾಸಕ ಎಂ.ಆರ್.ಪಾಟೀಲ್, “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯಂತೆ ಸ್ವಸ್ಥ ಭಾರತ ನಿರ್ಮಾಣಕ್ಕೆ ಸದೃಢ ಸಮಾಜದ ಅವಶ್ಯಕತೆಯಿದೆ. ಮಾದಕ ವಸ್ತುಗಳ ಪಿಡುಗು ಯುವ ಪೀಳಿಗೆಯ ಭವಿಷ್ಯವನ್ನು ಹಾಳು ಮಾಡುತ್ತಿದೆ. ಯುವಕರು ಮತ್ತು ಸಮಾಜವನ್ನು ಈ ದುಶ್ಚಟದಿಂದ ದೂರ ಇರಿಸಲು ಇಂತಹ ಜಾಗೃತಿ ಕಾರ್ಯಕ್ರಮಗಳು ಬಹಳ ಮುಖ್ಯವಾಗಿವೆ” ಎಂದರು. ಯುವಕರು ಈ ಮ್ಯಾರಥಾನ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ನಾಗನಗೌಡ ಸಾತ್ಮರ, ಯುವ ಮೋರ್ಚಾ ಅಧ್ಯಕ್ಷರಾದ ಚನ್ನಹುಂಬಿ, ಮಾಜಿ ಜಿಲ್ಲಾಧ್ಯಕ್ಷರಾದ ಈರಣ್ಣ ಜಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಟಿ.ಜಿ.ಬಾಲಣ್ಣವರ್, ನಮೋ ಯುವ ಮ್ಯಾರಥಾನ್ನ ತಾಲ್ಲೂಕು ಸಂಚಾಲಕರಾದ ಸಿದ್ದನಗೌಡ ಪಾಟೀಲ್, ಪ್ರಮುಖರಾದ ಮಾಲತೇಶ್ ಶ್ಯಾಗೋಟಿ ಮತ್ತು ರವಿ ಗೌಡ ಪಾಟೀಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕುಂದಗೋಳ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ‘ನಶಾ ಮುಕ್ತ ಭಾರತ’ದ ಸಂಕಲ್ಪಕ್ಕೆ ಬೆಂಬಲ ವ್ಯಕ್ತಪಡಿಸಿದರು.

