
ಧಾರವಾಡ: ಮಹಿಳೆಯರು ದಿನನಿತ್ಯ ರುದ್ರ ಪಠಣ ಮಾಡುವುದರಿಂದ 32 ಕಿ.ಮೀ ದೂರದಷ್ಟು ಸಕಾರಾತ್ಮಕ ಶಕ್ತಿ ಪಸರಿಸುತ್ತದೆ. ರುದ್ರ ಪಠಣದ ಮಹತ್ವವು ಅಗಾಧವಾಗಿದ್ದು, ಪ್ರತಿಯೊಬ್ಬರೂ ಇದರ ಲಾಭ ಪಡೆಯಬೇಕು ಎಂದು ಮಂಗಳಾ ಮಠದ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ರೆವಿನ್ಯೂ ಕಾಲನಿಯ ಶ್ರೀ ಸಿದ್ಧಾರೂಢ ಮಠದ ಸಭಾಭವನದಲ್ಲಿ ತರಂಗಿಣಿ ಮಹಿಳಾ ಮಂಡಳಿ ಆಯೋಜಿಸಿದ್ದ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಆಧುನಿಕ ಕಾಲದಲ್ಲಿ ಮಹಿಳೆಯರು ಹೆಚ್ಚು ಜಾಗರೂಕತೆಯಿಂದ ಇರಬೇಕು. ನಿರಂತರವಾಗಿ ಧಾರ್ಮಿಕ ಅಧ್ಯಯನ ಮಾಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕವಿತಾ ಹಿರೇಮಠ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರೇಣು ಹಿರೇಮಠ ಕಾರ್ಯಕ್ರಮವನ್ನು ನಿರೂಪಿಸಿದರೆ, ಲಕ್ಷ್ಮೀ ಮನ್ನಿಕೇರಿ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು. ವಿಜಯಲಕ್ಷ್ಮಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಬಳಿಗಾರ ವಂದನಾರ್ಪಣೆ ಮಾಡಿದರು. ತರಂಗಿಣಿ ಮಹಿಳಾ ಮಂಡಳದ ಎಲ್ಲ ಸದಸ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

