ಧಾರವಾಡ ಕೃಷಿ ಮೇಳದ ಮೊದಲ ದಿನವೇ 3.65 ಲಕ್ಷಗಳ ಜನಸಾಗರ:

Spread the love

ಧಾರವಾಡ,: ಕೃಷಿ ಕ್ಷೇತ್ರದ ತಾಜಾ ಆವಿಷ್ಕಾರಗಳು, ತಂತ್ರಜ್ಞಾನ, ಹೊಸ ತಳಿಯ ಬೀಜ ಹಾಗೂ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಸಾಕ್ಷಿಯಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಆರಂಭವಾದ ನಾಲ್ಕು ದಿನಗಳ ಕೃಷಿ ಮೇಳದ ಮೊದಲ ದಿನವೇ ಜನಸಾಗರ ಉಕ್ಕಿಬಂದಿತು. ಬರೋಬ್ಬರಿ 3.65 ಲಕ್ಷ ಮಂದಿ ಭೇಟಿ ನೀಡಿ ಇತಿಹಾಸ ನಿರ್ಮಿಸಿದೆ.

ಮಳೆಯ ಆತಂಕ, ಗಾಳಿ-ಚಳಿ ತುಂಬಿದ ವಾತಾವರಣವಿದ್ದರೂ ಸಹ ಜನರು ಉತ್ಸಾಹಭರಿತವಾಗಿ ಮೇಳದತ್ತ ಹರಿದು ಬಂದರು. ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಸಂಶೋಧಕರು, ವ್ಯಾಪಾರಿಗಳು, ಸಾಮಾನ್ಯ ನಾಗರಿಕರು ಎಂದು ಎಲ್ಲ ವರ್ಗದವರೂ ಆಗಮಿಸಿ, ಮೇಳವನ್ನು ಹಬ್ಬದ ವಾತಾವರಣಕ್ಕೆ ತರುವಂತೆ ಮಾಡಿದರು.

ಬೀಜ ಮಾರಾಟದಲ್ಲಿ ಹೊಸ ದಾಖಲೆ

ಮೇಳದ ಪ್ರಮುಖ ಆಕರ್ಷಣೆ ಎಂದರೆ ಬಿತ್ತನೆ ಬೀಜ ಮಾರಾಟ. ಕಳೆದ ವರ್ಷ ಮೊದಲ ದಿನ 460 ಕ್ವಿಂಟಲ್ ಹಿಂಗಾರಿ ಬೆಳೆ ಬೀಜಗಳು ಮಾರಾಟವಾಗಿ ಸುಮಾರು 49 ಲಕ್ಷ ರೂಪಾಯಿ ಆದಾಯ ಬಂದಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಪ್ರಮಾಣದ 271.5 ಕ್ವಿಂಟಲ್ ಬೀಜ ಮಾರಾಟವಾದರೂ, 21.78 ಲಕ್ಷ ರೂಪಾಯಿ ಮೌಲ್ಯದ ವ್ಯವಹಾರ ನಡೆದಿದೆ.

ರೈತಾಪಿ ಹೊಸ ತಳಿಯ ಬಿತ್ತನೆ ಬೀಜಗಳನ್ನು ಖರೀದಿಸಲು ಮುಗಿಬಿದ್ದು, ಬೀಜ ಮಾರಾಟ ಘಟಕದ ಮುಂದೆ ಉದ್ದನೆಯ ಸರತಿಗಳು ಕಂಡುಬಂದವು. ಬಿತ್ತನೆ ಬೀಜ ಖರೀದಿಸಿ ಹೊಲಗಳಿಗೆ ತೆರಳಲು ರೈತರು ತವಕದಿಂದ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಮೇಳದ ಆವರಣದಲ್ಲಿ ಜೀವಂತ ಚಿತ್ರಣ ಸೃಷ್ಟಿಸಿತು.

ಜನಸಂದಣಿಯಿಂದ ಕಂಗೊಳಿಸಿದ ಆವರಣ

ಮೊದಲ ದಿನವೇ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ, ಮೇಳದ ಆವರಣವು ನೂರಾರು ವಾಹನಗಳು, ಸಾವಿರಾರು ಜನರ ಸಂಚಾರದಿಂದ ಕಿತ್ತಳೆ ಬಣ್ಣದ ಹಬ್ಬದಂತಾಗಿತ್ತು. ಕುಟುಂಬ ಸಮೇತರಾಗಿ ಬಂದವರು ಪ್ರದರ್ಶನ ಕಣ್ತುಂಬಿಕೊಂಡು ಸಂತೋಷ ವ್ಯಕ್ತಪಡಿಸಿದರು. ತಂತ್ರಜ್ಞಾನವನ್ನು ನೇರವಾಗಿ ರೈತರಿಗೆ ತಲುಪಿಸಲು ಆಯೋಜಕರ ಉದ್ದೇಶ ಯಶಸ್ವಿಯಾಗುತ್ತಿರುವುದು ಸ್ಪಷ್ಟವಾಯಿತು.

ಇಂದು ಇನ್ನಷ್ಟು ಜನಸಾಗರ ನಿರೀಕ್ಷೆ

ಮೊದಲ ದಿನದ ಯಶಸ್ಸನ್ನು ಕಂಡು ಆಯೋಜಕರು ಮತ್ತು ಅಧಿಕಾರಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ರವಿವಾರ ಮೇಳದ ಎರಡನೇ ದಿನ, ಜನಸಂದಣಿ ದುಪ್ಪಟ್ಟು ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಭದ್ರತೆ ಹಾಗೂ ಸೌಲಭ್ಯ ವ್ಯವಸ್ಥೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *