

ಕುಂದಗೋಳ: ಅಧಿಕೃತ ಪರವಾನಗಿ ಇಲ್ಲದ ಏಜೆಂಟರು ತಾಲೂಕಿನ ಉಪನೊಂದಣಿ ಕಚೇರಿಗಳಲ್ಲಿ ರೈತರನ್ನು ಮತ್ತು ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಕುಂದಗೋಳ ತಾಲೂಕಾ ದಸ್ತಾವೇಜು ಬರಹಗಾರರ ಸಂಘದ ಸದಸ್ಯರು ತಹಶೀಲ್ದಾರ್ ರಾಜು ಮಾವರಕರವರಿಗೆ ಶುಕ್ರವಾರದಂದು ಮನವಿ ಸಲ್ಲಿಸಿದ್ದಾರೆ.
ಅಧಿಕೃತ ದಸ್ತಾವೇಜು ಬರಹಗಾರರು ಸಲ್ಲಿಸಿದ ಮನವಿಯಲ್ಲಿ, ‘ಕಾವೇರಿ-2’ ಯೋಜನೆ ಜಾರಿಯಾದ ನಂತರ ಸಾರ್ವಜನಿಕರಿಗೆ ಅನುಕೂಲವಾಗಿದ್ದರೂ, ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲಿ ಕಿಯೋಸ್ಕ್ ಆಪರೇಟರ್ ಶರಣಪ್ಪ ಶಿವಜಾತಪ್ಪನವರ ಎಂಬ ವ್ಯಕ್ತಿ ಅನಧಿಕೃತವಾಗಿ ನೊಂದಣಿ ಸಂಬಂಧಿತ ಪತ್ರಗಳನ್ನು ತಯಾರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ.
“ಸರ್ಕಾರಿ ಕಂಪ್ಯೂಟರ್, ಇಂಟರ್ನೆಟ್ ಮತ್ತು ವಿದ್ಯುತ್ ಅನ್ನು ಬಳಸಿಕೊಂಡು, ಯಾವುದೇ ಬಾಡಿಗೆ ಇಲ್ಲದೆ ಸರ್ಕಾರಿ ಕೊಠಡಿಯಲ್ಲೇ ಆತ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಅಮಾಯಕ ರೈತರನ್ನು, ಸಾರ್ವಜನಿಕರನ್ನು ಮರಳು ಮಾಡಿ, ನಾನೇ ಎಲ್ಲಾ ರೀತಿಯ ಖರೀದಿ, ಪಾಲು ವಿಭಜನೆ, ವರ್ಗಾವಣೆ ಪತ್ರಗಳನ್ನು ಮಾಡಿಕೊಡುತ್ತೇನೆ ಎಂದು ನಂಬಿಸುತ್ತಾ ವಂಚಿಸುತ್ತಿದ್ದಾನೆ” ಎಂದು ದೂರು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರಿ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಈ ವ್ಯಕ್ತಿ, ಕಚೇರಿ ಅವಧಿ ಮುಗಿದ ನಂತರವೂ ಮಧ್ಯರಾತ್ರಿಯವರೆಗೂ ಅಲ್ಲೇ ಇರುತ್ತಾನೆ. ಇದರಿಂದ ಅಧಿಕೃತ ಪರವಾನಗಿ ಪಡೆದು, ಸರ್ಕಾರಕ್ಕೆ ಶುಲ್ಕ ಪಾವತಿಸಿ ಕೆಲಸ ಮಾಡುತ್ತಿರುವ ದಸ್ತಾವೇಜು ಬರಹಗಾರರಿಗೆ ತೀವ್ರ ತೊಂದರೆಯಾಗಿದೆ. ಸರ್ಕಾರದ ಆದಾಯಕ್ಕೂ ಇದರಿಂದ ನಷ್ಟವಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಮೋಹನಕುಮಾರ ನಡೂರಮಠ, ಕಾರ್ಯದರ್ಶಿ ಬಸವರಾಜ ಅನ್ನೂರ ಸೇರಿದಂತೆ ಇತರ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಅಕ್ರಮ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ: ಪ್ರಕಾಶ ಬಸನಾಳ, ರಾಮಚಂದ್ರ ಎಸ್ ಸಾಳುಂಕೆ, ಬಸವರಾಜ ಬನ್ನೂರ, ಮಂಜುನಾಥ ರೊಟ್ಟಿ, ಬಸಪ್ಪ ಎಫ್ ಮಾದರ, ಸತೀಶಕುಮಾರ ಉಪಾಧ್ಯ, ದೇವಪ್ಪ ಇಚ್ಚಂಗಿ, ಬಸವರಾಜ ಯೋಗಪ್ಪನವರ, ಸೇರಿದಂತೆ ಇತರರು ಇದ್ದರು.

