
ಕುಂದಗೋಳ: ಮಹರ್ಷಿ ವಾಲ್ಮೀಕಿ ಜಯಂತಿಯೊಳಗೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಕಲ್ಪಿಸಬೇಕು ಎಂದು ಸಮಾಜದ ಮುಖಂಡರು ತಹಶೀಲ್ದಾರ್‌ಗೆ ಮನವಿ ಮಾಡಿಕೊಂಡರು.
ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರು ಈ ಬೇಡಿಕೆಯನ್ನು ಮಂಡಿಸಿದರು. ಹಲವು ವರ್ಷಗಳಿಂದ ಸಮುದಾಯ ಭವನದ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಕ್ಟೋಬರ್ 7 ರಂದು ನಡೆಯುವ ಜಯಂತಿಯೊಳಗೆ ನಿವೇಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಜಯಂತಿ ದಿನದಂದು ಪ್ರತಿ ಅಂಗನವಾಡಿ ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರ ಇಟ್ಟು ಜಯಂತಿ ಆಚರಿಸುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿಗಳಿಗೆ ಸೂಚನೆ
ಈ ಸಂಬಂಧ ಮಾತನಾಡಿದ ತಾಲೂಕು ಪಂಚಾಯಿತಿ ಇ.ಒ. ಜಗದೀಶ್ ಕಮ್ಮಾರ, “ಗ್ರಾಮ ಪಂಚಾಯಿತಿಗಳ ಮೂಲಕ ಪ್ರತಿ ಅಂಗನವಾಡಿಗಳಿಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಗಳನ್ನು ಒದಗಿಸಲಾಗುವುದು ಹಾಗೂ ಶಾಲಾ-ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಈ ಮಹನೀಯರ ಭಾವಚಿತ್ರವಿಟ್ಟು ಜಯಂತಿ ಆಚರಿಸಲು ಸೂಚಿಸಲಾಗುವುದು” ಎಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ರಾಜು ಮಾವರಕರ ಮಾತನಾಡಿ, “ಅಂದು ತಾಲೂಕಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಹಾಗೂ ಶಾಲಾ ಮಕ್ಕಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಾತನಾಡಿದ ಎಸ್ ಟಿ ಸಮಾಜದ ತಾಲ್ಲೂಕು ಅಧ್ಯಕ್ಷ ರಾಜು ದೊಡ್ಡಶಂಕರ, ಜಯಂತಿ ವಿಷವಾಗಿ “ಯಾವುದೇ ವಿಷಯಗಳನ್ನು ದೊಡ್ಡದು ಮಾಡುವುದು ಬೇಡ. ಗೌರವದಿಂದ ಪ್ರಕ್ರಿಯೆ ಪ್ರಕಾರ ಏನು ನಡೆಯಬೇಕೋ ಅದು ನಡೆಯಲಿ. ಮಾಧ್ಯಮದವರು ಕೂಡ ಸಹಕರಿಸಬೇಕು. ನಮ್ಮ ಸಮಾಜದ ಬಗ್ಗೆ ನಮಗೇ ಗೌರವ ಇರಬೇಕು” ಎಂದರು.
ಕೃಷಿಕ ಸಮಾಜ ನವದೆಹಲಿ ರಾಜ್ಯಾಧ್ಯಕ್ಷೆ ಮಾಣಿಕ್ಯ ಚಿಲ್ಲೂರ ಮಾತನಾಡಿ, “ವಾಲ್ಮೀಕಿ ಮಹರ್ಷಿಗಳು ಇತಿಹಾಸವನ್ನೇ ಸೃಷ್ಟಿಸಿದ ಧೀಮಂತ ನಾಯಕರು. ಅವರ ಬಗ್ಗೆ ಪತ್ರಿಕಾಗೋಷ್ಠಿ ಮಾಡಿ, ಎಲ್ಲ ಸಮಾಜದವರೂ ಅವರನ್ನು ಗೌರವಿಸುವ ಹಾಗೆ ಆಗಬೇಕು” ಎಂದು ಆಶಿಸಿದರು.
ಮುಂಖಡ ಬಸವರಾಜ ನಾಯ್ಕರ ಮಾತನಾಡಿ, “ಕಳೆದ ಸಾರಿ ಚರ್ಚೆ ಮಾಡಿದ ಹಾಗೆ, ತಾಲೂಕಿನ 27 ಗ್ರಾಮ ಪಂಚಾಯಿತಿಗಳು, ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ಹಾಕಬೇಕು. ಈ ಬಗ್ಗೆ ಪಂಚಾಯಿತಿಯಿಂದಲೇ ಒಂದು ಆದೇಶ ಹೊರಡಿಸಬೇಕು” ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಂಖಡರುಗಳಾದ, ರವೀಂದ್ರ ದೊಡ್ಡಮನಿ, ಶಂಕ್ರಣ್ಣ ಹಿತ್ತಮನಿ, ಅಡಿವೆಪ್ಪ ಹೆಬಸೂರ, ವೀರಣ್ಣ ಗೌಡನಾಯ್ಕರ್, ಬಸವರಾಜ್ ಗೋವಿಂದಪ್ಪನವರ, ಗಂಗಪ್ಪ ಕಟ್ಟಿಮನಿ, ನಾರಾಯಣ ಕುರಟ್ಟಿ, ಬಸವರಾಜ್ ನಾಯ್ಕರ,ಅರ್ಜುನ್ ತಳವಾರ್ ,ಅಡಿವಪ್ಪ ತಳವಾರ, ವೀರಪ್ಪ ರಾಟಿ, ಹೊಣ್ಣಪ್ಪ ದೊಡ್ಡಮನಿ, ಸಿದ್ದಪ್ಪ ಚೂರಿ ಗೋಪಾಲ್ ದೊಡ್ಡಮನಿ, ಸೇರಿದಂತೆ ಅನೇಕರಿದ್ದರು

