ತಂಬುರ ಗ್ರಾ ಪಂ: ಹಣ ದುರುಪಯೋಗ ಆರೋಪ, ಪಿಡಿಒ ಅಮಾನತ್ತು

Spread the love

ಕಲಘಟಗಿ: ಕರ್ತವ್ಯ ಲೋಪ ಹಾಗೂ ಹಣಕಾಸಿನ ದುರುಪಯೋಗದ ಗಂಭೀರ ಆರೋಪದ ಮೇಲೆ ಕಲಘಟಗಿ ತಾಲೂಕಿನ ತಂಬೂರು ಹಾಗೂ ಹೆಚ್ಚುವರಿ ಪ್ರಭಾರ ಮುಕ್ಕಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?
ಪಿಡಿಒ ನಾಗರಾಜಕುಮಾರ ಅವರು, ತಂಬೂರು ಮತ್ತು ಮುಕ್ಕಲ ಗ್ರಾಮ ಪಂಚಾಯತ್‌ಗಳ ಎಸ್ಕೋ ಬ್ಯಾಂಕ್ ಖಾತೆಯಿಂದ ಖಾಸಗಿ ವ್ಯಕ್ತಿಗಳಿಗೆ ಹಣ ಪಾವತಿಸಿರುವುದು ಕಂಡುಬಂದಿದೆ. ಸರ್ಕಾರದ ನಿಯಮ ಮತ್ತು ಇಲಾಖಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ಹಣ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.

ತಂಬೂರು ಗ್ರಾ.ಪಂ.ನಲ್ಲಿ 2024-25ನೇ ಸಾಲಿನಲ್ಲಿ 5.10 ಲಕ್ಷ ರೂ., 2025-26ನೇ ಸಾಲಿನಲ್ಲಿ 2.28 ಲಕ್ಷ ರೂ. ಹಾಗೂ ಮುಕ್ಕಲ ಗ್ರಾ.ಪಂ.ನಲ್ಲಿ 2024-25ನೇ ಸಾಲಿನಲ್ಲಿ 4.20 ಲಕ್ಷ ರೂ., 2025-26ನೇ ಸಾಲಿನಲ್ಲಿ 1.30 ಲಕ್ಷ ರೂ. ಹಣವನ್ನು ಖಾಸಗಿ ವ್ಯಕ್ತಿಗಳಿಗೆ ಸಂದಾಯ ಮಾಡಿ ಹಣಕಾಸು ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗ್ರಾಮ ಪಂಚಾಯತಿಗಳ ಎಸ್ಕೋ ಖಾತೆಗಳಲ್ಲಿ ಉಳಿದ ಅನುದಾನವನ್ನು ಕಡ್ಡಾಯವಾಗಿ ಹೆಸ್ಕಾಂ ಕಂಪನಿಗಳಿಗೆ ಮಾತ್ರ ಪಾವತಿಸಬೇಕು ಎಂದು ಸೂಚಿಸಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳು (1957) ಅಡಿಯಲ್ಲಿ ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಇಲಾಖಾ ವಿಚಾರಣೆ ಬಾಕಿ ಉಳಿಸಿಕೊಂಡು ಅಮಾನತ್ತುಗೊಳಿಸಲಾಗಿದೆ.

Leave a Reply

Your email address will not be published. Required fields are marked *