ಜನಗಣತಿ ಕರ್ತವ್ಯದ ಬಗ್ಗೆ ಸಂಪೂರ್ಣ ಅರಿವು ಹೊಂದಿ, ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ

Spread the love

ಚಾಮರಾಜನಗರ: ಜನಗಣತಿ-2027ರ ಎರಡನೇ ಹಂತದ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ತಮಗೆ ವಹಿಸಲಾದ ಜವಾಬ್ದಾರಿಗಳ ಕುರಿತು ತರಬೇತಿ ಹಂತದಲ್ಲಿಯೇ ಸಂಪೂರ್ಣ ಅರಿವು ಪಡೆದುಕೊಳ್ಳಬೇಕು. ಯಾವುದೇ ಗೊಂದಲ ಅಥವಾ ಅನುಮಾನಗಳಿಗೆ ಅವಕಾಶ ನೀಡದೆ, ಆತ್ಮವಿಶ್ವಾಸದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದ ಹಳೆಯ ಕೆಡಿಪಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಹಾಗೂ ಚಾರ್ಜ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಗಣತಿ ಪ್ರಕ್ರಿಯೆಯ ಕುರಿತು ಅಧಿಕಾರಿಗಳು ಆಳವಾಗಿ ಅಧ್ಯಯನ ಮಾಡಬೇಕು. ತರಬೇತಿ ಸಂದರ್ಭದಲ್ಲಿ ಎದುರಾಗುವ ಎಲ್ಲ ಅನುಮಾನಗಳನ್ನು ಅಲ್ಲಿಯೇ ನಿವಾರಿಸಿಕೊಳ್ಳಬೇಕು. ಕರ್ತವ್ಯದ ಬಗ್ಗೆ ಸಂಪೂರ್ಣ ತಿಳುವಳಿಕೆ ಪಡೆದುಕೊಂಡು, ಜವಾಬ್ದಾರಿಯುತವಾಗಿ ನಿಯೋಜಿತ ಕೆಲಸವನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ಜನಗಣತಿ ಕಾರ್ಯದ ವೇಳಾಪಟ್ಟಿಯನ್ನು ವಿವರಿಸಿದ ಜಿಲ್ಲಾಧಿಕಾರಿಗಳು, ಸ್ವಯಂ ಗಣತಿ ಪ್ರಕ್ರಿಯೆಯು ಜನವರಿ 10ರಿಂದ 24ರವರೆಗೆ ನಡೆಯಲಿದ್ದು, ಜನವರಿ 25ರಿಂದ ಫೆಬ್ರವರಿ 28ರವರೆಗೆ ಮನೆ ಮನೆಗೆ ತೆರಳಿ ಗಣತಿ ಕಾರ್ಯ ಕೈಗೊಳ್ಳಲಾಗುತ್ತದೆ. ಫೆಬ್ರವರಿ 28ರಂದು ಸಂಜೆ 6 ಗಂಟೆಯ ನಂತರ ವಸತಿ ರಹಿತರ ಗಣತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಜನಗಣತಿಯು ಅತ್ಯಂತ ಮಹತ್ವದ ರಾಷ್ಟ್ರೀಯ ಕಾರ್ಯವಾಗಿದ್ದು, ಇದರಲ್ಲಿ ಭಾಗವಹಿಸುವ ಅವಕಾಶವನ್ನು ಹೆಮ್ಮೆಯಿಂದ ಸ್ವೀಕರಿಸಬೇಕು. ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಜವಾಬ್ದಾರಿಯನ್ನು ಅರಿತು, ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಅತ್ಯಂತ ಶ್ರದ್ಧೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಬೆಂಗಳೂರಿನ ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ ವಿನಿತ್, ರಮೇಶ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *