ರಾಜ್ಯದ ಎಂಟು ಸಚಿವರು ಶತಕೋಟ್ಯಧಿಪತಿಗಳು: ಎಡಿಆರ್ ಸಮೀಕ್ಷೆಯಲ್ಲಿ ಬಹಿರಂಗ

Spread the love

ಬೆಂಗಳೂರು: ಕರ್ನಾಟಕದ ಎಂಟು ಸಚಿವರು ಶತಕೋಟ್ಯಧಿಪತಿಗಳಾಗಿದ್ದು, ದೇಶದಲ್ಲಿ ಅತಿ ಹೆಚ್ಚು ಶ್ರೀಮಂತ ಸಚಿವರನ್ನು ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಸಮೀಕ್ಷೆಯು ಬಹಿರಂಗಪಡಿಸಿದೆ.

ಸಮೀಕ್ಷೆಯ ವರದಿ ಪ್ರಕಾರ, ಕರ್ನಾಟಕದ ನಂತರ ಆಂಧ್ರಪ್ರದೇಶ ಆರು ಶತಕೋಟ್ಯಧಿಪತಿ ಸಚಿವರೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ನಾಲ್ಕು ಸಚಿವರೊಂದಿಗೆ ಮೂರನೇ ಸ್ಥಾನದಲ್ಲಿದೆ. ದೇಶದ ಅಗ್ರ ಹತ್ತು ಶ್ರೀಮಂತ ಸಚಿವರಲ್ಲಿ ಎಂಟು ಮಂದಿ ದಕ್ಷಿಣ ಭಾರತಕ್ಕೆ ಸೇರಿದವರಾಗಿದ್ದಾರೆ. ಇನ್ನು ಕೇಂದ್ರ ಸಚಿವ ಸಂಪುಟದಲ್ಲಿರುವ 72 ಮಂದಿ ಸಚಿವರ ಪೈಕಿ ಆರು ಮಂದಿ ಶತಕೋಟ್ಯಧಿಪತಿಗಳಿದ್ದಾರೆ.

ಡಿಸಿಎಂ: ಡಿಕೆ ಶಿವಕುಮಾರ್ ಎರಡನೇ ಶ್ರೀಮಂತ ಸಚಿವ
ದೇಶದ ಅತ್ಯಂತ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಆಂಧ್ರಪ್ರದೇಶದ ಟಿಡಿಪಿ ಸಚಿವ ಚಂದ್ರಶೇಖರ್ ಪೆಮ್ಮಸಾನಿ (₹5,705 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ₹1,413 ಕೋಟಿ ಆಸ್ತಿಯೊಂದಿಗೆ ದೇಶದ ಎರಡನೇ ಅತಿ ಶ್ರೀಮಂತ ಸಚಿವರಾಗಿದ್ದಾರೆ. ಬೈರತಿ ಸುರೇಶ್ ₹648 ಕೋಟಿ ಆಸ್ತಿಯೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಇದೇ ವೇಳೆ, ತ್ರಿಪುರಾದ ಸಚಿವ ಸುಕ್ಲಾ ಚರಣ್ ನೋತಿಯಾ ₹2 ಲಕ್ಷ ಆಸ್ತಿಯೊಂದಿಗೆ ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ಸಚಿವರಾಗಿದ್ದಾರೆ. ಈ ಸಮೀಕ್ಷೆಯು ರಾಜಕೀಯ ವಲಯದಲ್ಲಿ ಸಂಪತ್ತಿನ ಅಸಮಾನತೆಯ ಕುರಿತು ಮತ್ತಷ್ಟು ಚರ್ಚೆಗೆ ನಾಂದಿ ಹಾಡಿದೆ.

Leave a Reply

Your email address will not be published. Required fields are marked *