ಕೇಂದ್ರದಿಂದ ರಾಜ್ಯಗಳಿಗೆ ₹1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ ₹4,504 ಕೋಟಿ ಬಿಡುಗಡೆ!

Spread the love

ದೆಹಲಿ: ಹಬ್ಬದ ಸೀಸನ್‌ ಹಿನ್ನೆಲೆಯಲ್ಲಿ ಹಾಗೂ ರಾಜ್ಯಗಳ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಭರ್ಜರಿ ಕೊಡುಗೆ ನೀಡಿದೆ. ಕೇಂದ್ರ ಹಣಕಾಸು ಸಚಿವಾಲಯವು ಶನಿವಾರ (ಅ.31) ದೇಶದ ವಿವಿಧ ರಾಜ್ಯಗಳಿಗೆ ಹೆಚ್ಚುವರಿಯಾಗಿ ₹1,09,019 ಕೋಟಿ ತೆರಿಗೆ ಹಂಚಿಕೆ ಮೊತ್ತವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ನೀಡುವ ನಿಯಮಿತ ಮಾಸಿಕ ತೆರಿಗೆ ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿ ಬಿಡುಗಡೆಯಾದ ಮೊತ್ತವಾಗಿದ್ದು, 2026-27ನೇ ಹಣಕಾಸು ವರ್ಷದ ಎರಡನೇ ಹೆಚ್ಚುವರಿ ಕಂತಾಗಿದೆ.

ಮುಂಬರುವ ಹಬ್ಬದ ಸೀಸನ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಗಳು ಬಂಡವಾಳ ವೆಚ್ಚವನ್ನು ತ್ವರಿತಗೊಳಿಸಲು ಹಾಗೂ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ಅಗತ್ಯವಿರುವ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಈ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ರಾಜ್ಯವಾರು ಹಂಚಿಕೆಯಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ₹19,208 ಕೋಟಿ ಪಡೆದುಕೊಂಡಿದ್ದು, ಬಿಹಾರ ₹10,845 ಕೋಟಿ ಹಾಗೂ ಮಧ್ಯಪ್ರದೇಶ ₹8,010 ಕೋಟಿ ಪಡೆದಿವೆ. ಪಶ್ಚಿಮ ಬಂಗಾಳಕ್ಕೆ ₹7,866 ಕೋಟಿ, ಮಹಾರಾಷ್ಟ್ರಕ್ಕೆ ₹7,022 ಕೋಟಿ ಹಾಗೂ ರಾಜಸ್ಥಾನಕ್ಕೆ ₹6,460 ಕೋಟಿ ಹಂಚಿಕೆ ಮಾಡಲಾಗಿದೆ.

ಕರ್ನಾಟಕಕ್ಕೆ ₹4,504 ಕೋಟಿ ಬಿಡುಗಡೆ

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಒಡಿಶಾಕ್ಕೆ ₹4,819 ಕೋಟಿ, ಆಂಧ್ರಪ್ರದೇಶಕ್ಕೆ ₹4,597 ಕೋಟಿ, ಕರ್ನಾಟಕಕ್ಕೆ ₹4,504 ಕೋಟಿ ಹಾಗೂ ತಮಿಳುನಾಡಿಗೆ ₹4,466 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನು ಗುಜರಾತ್‌ಗೆ ₹4,094 ಕೋಟಿ, ಜಾರ್ಖಂಡ್‌ಗೆ ₹3,660 ಕೋಟಿ, ಛತ್ತೀಸ್‌ಗಢಕ್ಕೆ ₹3,602 ಕೋಟಿ, ಅಸ್ಸಾಂಗೆ ₹3,552 ಕೋಟಿ, ಕೇರಳಕ್ಕೆ ₹2,597 ಕೋಟಿ ಹಾಗೂ ತೆಲಂಗಾಣಕ್ಕೆ ₹2,370 ಕೋಟಿ ಹಂಚಿಕೆ ಮಾಡಲಾಗಿದೆ.

ಇದಕ್ಕೂ ಮೊದಲು ಆಗಸ್ಟ್ 1ರಂದು ಕೇಂದ್ರ ಸರ್ಕಾರವು ರಾಜ್ಯಗಳ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚಗಳಿಗೆ ನೆರವಾಗುವ ಉದ್ದೇಶದಿಂದ ₹1,09,019 ಕೋಟಿ ಮುಂಗಡ ತೆರಿಗೆ ಹಂಚಿಕೆ ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಹೆಚ್ಚುವರಿ ಕಂತಿನ ರೂಪದಲ್ಲಿ ಮತ್ತೊಂದು ಅಷ್ಟೇ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯ ಒಂದು ಭಾಗವನ್ನು ರಾಜ್ಯ ಸರ್ಕಾರಗಳೊಂದಿಗೆ ಹಂಚಿಕೊಳ್ಳುವುದನ್ನೇ ತೆರಿಗೆ ಹಂಚಿಕೆ ಎನ್ನಲಾಗುತ್ತದೆ. 16ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಕೇಂದ್ರ ತೆರಿಗೆಗಳ ವಿಭಜನಾ ನಿಧಿಯಲ್ಲಿ ರಾಜ್ಯಗಳಿಗೆ ಶೇ.41ರಷ್ಟು ಪಾಲು ನೀಡಲಾಗುತ್ತಿದೆ. 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ ರಾಜ್ಯಗಳಿಗೆ ಒಟ್ಟು ₹15.26 ಲಕ್ಷ ಕೋಟಿ ತೆರಿಗೆ ಹಂಚಿಕೆ ಮಾಡುವ ಗುರಿ ನಿಗದಿಪಡಿಸಲಾಗಿದೆ.

Leave a Reply

Your email address will not be published. Required fields are marked *