

ಬೆಳಗಾವಿಯ: ಬಿಮ್ಸ್ (BIMS) ಸರ್ಕಾರಿ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಎಂದು ಸುಳ್ಳು ಹೇಳಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯು ಆಸ್ಪತ್ರೆಯ ಭದ್ರತಾ ಲೋಪದ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಾರವಾರ ಮೂಲದ ಸನಾ ಶೇಖ್ ಎಂಬ ಯುವತಿಯೇ ಈ ಕೃತ್ಯದ ಆರೋಪಿಯಾಗಿದ್ದಾಳೆ. ಕಳೆದ ಎರಡು ಮೂರು ತಿಂಗಳಿಂದ ಈಕೆ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಕೋಟ್ ಧರಿಸಿ, ಸರ್ಜಿಕಲ್ ವಾರ್ಡ್, ಒಪಿಡಿ ಸೇರಿ ವಿವಿಧ ವಿಭಾಗಗಳಲ್ಲಿ ವೈದ್ಯರಂತೆ ಓಡಾಡಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಳು ಎನ್ನಲಾಗಿದೆ. ಆಕೆಯ ವರ್ತನೆಯ ಬಗ್ಗೆ ಅನುಮಾನಗೊಂಡ ಆಸ್ಪತ್ರೆಯ ಸಿಬ್ಬಂದಿಗಳು ಪ್ರಶ್ನಿಸಿದಾಗ, ಈಕೆ ಬಿಮ್ಸ್ ನಿರ್ದೇಶಕರ ಹೆಸರು ಹೇಳಿ ಬೆದರಿಕೆ ಹಾಕಿದ್ದಳು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.
ಹೆಡ್ ಕುಮ್ಮಕ್ಕು?
ನಕಲಿ ವೈದ್ಯ ವಿದ್ಯಾರ್ಥಿನಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಭದ್ರತಾ ಸಿಬ್ಬಂದಿಯು ಆಕೆಯನ್ನು ಹಿಡಿದು ಬಿಮ್ಸ್ ಸರ್ಜನ್ ಮತ್ತು ಆರ್ಎಂಒ (RMO) ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಆಕೆಯನ್ನು ವಿಚಾರಣೆಗೊಳಪಡಿಸಿದಾಗ, ತಾನು ಬೇರೊಂದು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲದೆ, ಆಸ್ಪತ್ರೆಯ ವಿಭಾಗವೊಂದರ ಮುಖ್ಯಸ್ಥರ ಕುಮ್ಮಕ್ಕಿನಿಂದ ತಾನು ಈ ಕೆಲಸ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾಳೆ.
ಈ ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಬಿಮ್ಸ್ ನಿರ್ದೇಶಕರು ನಿರಾಕರಿಸಿದ್ದಾರೆ. ಈ ಘಟನೆಯು ಸರ್ಕಾರಿ ಆಸ್ಪತ್ರೆಗಳಲ್ಲಿನ ಭದ್ರತಾ ವ್ಯವಸ್ಥೆ ಮತ್ತು ನಿರ್ವಹಣೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆಡಳಿತ ಮಂಡಳಿಯ ಯಡವಟ್ಟು ಮತ್ತೊಮ್ಮೆ ಬಯಲಾಗಿದೆ.

