ಧಾರವಾಡ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟ: ಒಟ್ಟು 13,78,016 ಮತದಾರರು; ಪುರುಷರಿಗಿಂತ ಮಹಿಳೆಯರೇ ಹೆಚ್ಚು

Spread the love

ಧಾರವಾಡ (ಅ. 27): ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13,78,016 ಮತದಾರರಿದ್ದಾರೆ. ಇವರಲ್ಲಿ 6,87,019 ಪುರುಷರು, 6,90,931 ಮಹಿಳೆಯರು ಹಾಗೂ 66 ಇತರೆ ಮತದಾರರಿದ್ದಾರೆ. ಜಿಲ್ಲೆಯಲ್ಲಿರುವ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.

ಅವರು ಅ. 27ರಂದು ಮಧ್ಯಾಹ್ನ ಕೃಷಿ ವಿಶ್ವವಿದ್ಯಾಲಯದ ಮಾಧ್ಯಮ ಕೊಠಡಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರವಾರು ಮತದಾರರ ವಿವರ

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನವಲಗುಂದದಲ್ಲಿ 1,95,790, ಕುಂದಗೋಳದಲ್ಲಿ 1,79,005, ಧಾರವಾಡದಲ್ಲಿ 1,97,127, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 1,85,022, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 2,08,805, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 2,22,477 ಹಾಗೂ ಕಲಘಟಗಿಯಲ್ಲಿ 1,89,790 ಮತದಾರರಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 13,78,016 ಮತದಾರರು ನೋಂದಣಿಯಾಗಿದ್ದಾರೆ.

47,937 ಮತದಾರರಿಗೆ ನೋಟಿಸ್

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕರಡು ಮತದಾರರ ಪಟ್ಟಿಯಲ್ಲಿನ ವಿವರಗಳ ಪರಿಶೀಲನೆಗಾಗಿ ಒಟ್ಟು 47,937 ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ 47,978 ನೋಟಿಸ್‌ಗಳನ್ನು ವಿತರಿಸಲಾಗಿದ್ದು, 47,978 ವಿಚಾರಣೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ, ಕೇಂದ್ರ, ಪಶ್ಚಿಮ ಹಾಗೂ ಕಲಘಟಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,214 ಮತದಾರರ ವಿವರಗಳನ್ನು ಪರಿಶೀಲಿಸಲಾಗಿದ್ದು, 49 ಮತದಾರರು ಅನರ್ಹರೆಂದು ಗುರುತಿಸಲಾಗಿದೆ. ಅಲ್ಲದೆ, 1,797 ಪ್ರಕರಣಗಳು ಅಂತಿಮ ಪ್ರಕಟಣೆಗಾಗಿ ಬಾಕಿ ಉಳಿದಿವೆ. ವಿಚಾರಣೆ ಪೂರ್ಣಗೊಂಡ ನಂತರದ ಪ್ರಕ್ರಿಯೆಯಲ್ಲಿ 43,064 ಪ್ರಕರಣಗಳನ್ನು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದ್ದು, ವಿಚಾರಣೆ ನಡೆಸದೆ 3,118 ಪ್ರಕರಣಗಳನ್ನು ಅಂತಿಮ ಪ್ರಕಟಣೆಗಾಗಿ ಕಾಯ್ದಿರಿಸಲಾಗಿದೆ.

ಜಿಲ್ಲೆಯ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 13,53,946 ಮತದಾರರಿದ್ದರು. ವರದಿಯ ಪ್ರಕಾರ, 13,05,967 ಮತದಾರರ ಪ್ರಕರಣಗಳನ್ನು ಅಂತಿಮ ಪ್ರಕಟಣೆಗೆ ಸಂಬಂಧಿಸಿದಂತೆ ದಾಖಲಿಸಲಾಗಿತ್ತು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 15,151 ಯುವ ಮತದಾರರು

ಜಿಲ್ಲೆಯಲ್ಲಿ ಒಟ್ಟು 15,151 ಯುವ ಮತದಾರರಿದ್ದು, ಇವರಲ್ಲಿ 8,321 ಪುರುಷರು ಹಾಗೂ 6,830 ಮಹಿಳೆಯರಿದ್ದಾರೆ. ಕ್ಷೇತ್ರವಾರು ವಿವರದಂತೆ ನವಲಗುಂದದಲ್ಲಿ 2,024, ಕುಂದಗೋಳದಲ್ಲಿ 1,638, ಧಾರವಾಡದಲ್ಲಿ 2,343, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 2,312, ಕೇಂದ್ರದಲ್ಲಿ 2,062, ಪಶ್ಚಿಮದಲ್ಲಿ 2,261 ಹಾಗೂ ಕಲಘಟಗಿಯಲ್ಲಿ 2,511 ಯುವ ಮತದಾರರು ನೋಂದಣಿಯಾಗಿದ್ದಾರೆ.

63 ಅನಿವಾಸಿ ಭಾರತೀಯ ಮತದಾರರು

ಜಿಲ್ಲೆಯಲ್ಲಿ ಒಟ್ಟು 63 ಅನಿವಾಸಿ ಭಾರತೀಯ (ಎನ್‌ಆರ್‌ಐ) ಮತದಾರರು ನೋಂದಣಿಯಾಗಿದ್ದು, ಇವರಲ್ಲಿ 44 ಪುರುಷರು ಹಾಗೂ 19 ಮಹಿಳೆಯರಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ 39, ಪಶ್ಚಿಮ ಕ್ಷೇತ್ರದಲ್ಲಿ 13, ಪೂರ್ವ ಕ್ಷೇತ್ರದಲ್ಲಿ 9 ಹಾಗೂ ಧಾರವಾಡ ಕ್ಷೇತ್ರದಲ್ಲಿ ಇಬ್ಬರು ಅನಿವಾಸಿ ಭಾರತೀಯ ಮತದಾರರಿದ್ದಾರೆ. ನವಲಗುಂದ, ಕುಂದಗೋಳ ಹಾಗೂ ಕಲಘಟಗಿ ಕ್ಷೇತ್ರಗಳಲ್ಲಿ ಅನಿವಾಸಿ ಭಾರತೀಯ ಮತದಾರರು ನೋಂದಣಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

30,375 ಮತದಾರರ ಸೇರ್ಪಡೆ; 6,305 ಹೆಸರುಗಳ ತೆರವು

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿ ಒಟ್ಟು 30,375 ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. 6,305 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, 30,726 ಮತದಾರರ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 24,070 ಮತದಾರರ ನಿವ್ವಳ ಹೆಚ್ಚಳವಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಪ್ರಮುಖವಾಗಿ ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಹಾಗೂ ಇತರೆ ಕಾರಣಗಳು ಕಂಡುಬಂದಿವೆ. ಒಟ್ಟು 4,494 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 1,787 ಮತದಾರರ ಹೆಸರುಗಳನ್ನು ಇತರೆ ಕಾರಣಗಳಿಂದ ತೆಗೆದುಹಾಕಲಾಗಿದೆ. 14 ಮಂದಿ ಈಗಾಗಲೇ ಬೇರೆಡೆ ನೋಂದಣಿಯಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಸಾವಿರ ಪುರುಷರಿಗೆ 1,006 ಮಹಿಳಾ ಮತ್ತು ಇತರೆ ಮತದಾರರು

ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ 6,87,019 ಪುರುಷರು, 6,90,931 ಮಹಿಳೆಯರು ಹಾಗೂ 66 ಇತರೆ ಮತದಾರರಿದ್ದಾರೆ. ಒಟ್ಟು ಮಹಿಳಾ ಮತ್ತು ಇತರೆ ಮತದಾರರ ಸಂಖ್ಯೆ 6,90,997 ಆಗಿದೆ. ಈ ಮೂಲಕ ಪ್ರತಿ 1,000 ಪುರುಷ ಮತದಾರರಿಗೆ 1,006 ಮಹಿಳಾ ಮತ್ತು ಇತರೆ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.

ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿ ಲಭ್ಯ

ಜಿಲ್ಲೆಯ ಅಂತಿಮ ಮತದಾರರ ಪಟ್ಟಿಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ಅವರ ವೆಬ್‌ಸೈಟ್‌ನಲ್ಲಿಯೂ ಮತದಾರರ ಪಟ್ಟಿಗಳು ಲಭ್ಯವಿರಲಿವೆ ಎಂದು ತಿಳಿಸಿದರು.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿಯೂ ಮಾಹಿತಿ ಪಡೆಯಬಹುದು. ಸಾರ್ವಜನಿಕರು ಹಾಗೂ ಮತದಾರರು ಕೆಳಗಿನ ಲಿಂಕ್‌ಗಳ ಮೂಲಕ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬಹುದು.

ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್: https://dharwad.inc.in/en/elections/

ಚುನಾವಣಾ ಆಯೋಗದ ಮತದಾರರ ಪಟ್ಟಿ ಲಿಂಕ್: https://voters.eci.gov.in/download-eroll?stateCode=S10

ಮತದಾರರು ತಮ್ಮ ಹೆಸರು, ವಿಳಾಸ ಸೇರಿದಂತೆ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *