ಧಾರವಾಡದಲ್ಲಿ ದಸರಾ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Spread the love

ಧಾರವಾಡ: ೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಶುಕ್ರವಾರದಂದು ನಗರದ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು, ಕ್ರೀಡೆಯಲ್ಲಿ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿ, ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. “ಗೆಲುವು-ಸೋಲು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ” ಎಂಬ ತಮ್ಮ ಜೀವನ ಪಾಠವನ್ನು ಅವರು ಕ್ರೀಡಾಪಟುಗಳಿಗೆ ತಿಳಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿ ಆಗಮನವಾಯಿತು. ಇದು ಕ್ರೀಡಾಕೂಟಕ್ಕೆ ಹೊಸ ಹುರುಪು ನೀಡಿತು. ನಂತರ, ಎಲ್ಲಾ ಕ್ರೀಡಾಪಟುಗಳಿಗೆ ಶಿಲ್ಪಾ ಹೊಸಮನಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು, ಕ್ರೀಡೆ ಮತ್ತು ಶಿಸ್ತಿನ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಭಾರ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಅವರು ಎಲ್ಲರನ್ನೂ ಸ್ವಾಗತಿಸಿದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ತರಬೇತುದಾರ ರಂಗನಾಥ್ ಅವರು ವಂದನಾರ್ಪಣೆ ಮಾಡಿದರು. ನಿವೃತ್ತ ದೈಹಿಕ ಶಿಕ್ಷಕ ಪಡತಾರೆ ಹಾಗೂ ರಾಜ್ಯ ಒಲಂಪಿಕ್ ಕ್ರೀಡಾಕೂಟದ ಪದಕ ವಿಜೇತರು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *