ಶಿಕಾರಿಪುರದಲ್ಲಿ ಕಾರು–ಕ್ಯಾಂಟರ್ ಡಿಕ್ಕಿ: ನಾಲ್ವರ ದುರ್ಮರಣ; ಓರ್ವನಿಗೆ ಗಂಭೀರ ಗಾಯ

Spread the love

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಗ್ರಾಮದ ಸಮೀಪ ಶುಕ್ರವಾರ ಕಾರು ಹಾಗೂ ಅಡಿಕೆ ತುಂಬಿದ್ದ ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ಶಿಕಾರಿಪುರ ತಾಲ್ಲೂಕಿನ ಮುತ್ತಗಿ ಗ್ರಾಮದ ನಿವಾಸಿಗಳಾದ ಉಜ್ಜಪ್ಪ (77) ಮತ್ತು ಅವರ ಪತ್ನಿ ಲಲಿತಮ್ಮ (65), ಉಜ್ಜಪ್ಪ ಅವರ ಸಹೋದರಿ ಹಾಗೂ ಹಿರೇಕೆರೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಜಯಮ್ಮ (64) ಮತ್ತು ಕಾರು ಚಾಲಕ, ಅದೇ ಗ್ರಾಮದ ಸಿದ್ದು ವಾಲ್ಮೀಕಿ (35) ಎಂದು ಗುರುತಿಸಲಾಗಿದೆ. ಜಯಮ್ಮ ಅವರ ಪತಿ ಹನುಮಂತಪ್ಪ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಜ್ಜಪ್ಪ ಅವರನ್ನು ಮನೆಗೆ ಕರೆದುಕೊಂಡು ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಕಾರು ಚಾಲಕ ಸಿದ್ದು ವಾಲ್ಮೀಕಿ ಹಾಗೂ ಲಲಿತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಜ್ಜಪ್ಪ ಮತ್ತು ಜಯಮ್ಮ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *