
ಧಾರವಾಡ: ನ್ಯಾಯಯುತವಾಗಿ ಮಾಡಬೇಕಾಗಿದ್ದ ಕೆಲಸಕ್ಕೆ ₹10,000 ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಧಾರವಾಡದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಕುರಿತು ಧಾರವಾಡ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಾನೂನು ಮಾಪನಶಾಸ್ತ್ರ ಇಲಾಖೆ, ಎಪಿಎಂಸಿ, ಹುಬ್ಬಳ್ಳಿಯ ಸಹಾಯಕ ನಿಯಂತ್ರಕರಾಗಿದ್ದ ಮಧುಕರ ರಾಜಾರಾಮ ಘೋಡಕೆ ಮತ್ತು ಅದೇ ಕಚೇರಿಯ ಎಸ್.ಡಿ.ಎ. ಎಸ್.ಎನ್. ಲೀಲಾವತಿ ಅವರು ಲಂಚ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿದ್ದಾರೆ. ನ್ಯಾಯಾಧೀಶರಾದ ಶ್ರೀಮತಿ ಜರೀನಾ ಅವರು ಇಬ್ಬರಿಗೂ ತಲಾ ₹10,000 ದಂಡದ ಜೊತೆಗೆ, 4 ಮತ್ತು 5 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಘಟನೆ ವಿವರ:
2017ರ ಈ ಪ್ರಕರಣದಲ್ಲಿ, ಸಹಾಯಕ ನಿಯಂತ್ರಕ ಮಧುಕರ ಘೋಡಕೆ ಅವರು ದೂರುದಾರರಾದ ಗೋಕುಲ ಸೌದಾಗರ ಮತ್ತು ಸುನೀಲ್ ಬಾಕಳೆ ಅವರಿಂದ ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ತಮ್ಮ ಕಚೇರಿಯ ಗುತ್ತಿಗೆ ಆಧಾರಿತ ಬೆರಳಚ್ಚುಗಾರರಾದ ರಾಘವೇಂದ್ರ ಯಳವತ್ತಿ ಮೂಲಕ ಸ್ವೀಕರಿಸುತ್ತಿದ್ದರು. ಇದೇ ವೇಳೆ, ಎಸ್.ಡಿ.ಎ. ಲೀಲಾವತಿ ಅವರು ಲಂಚ ನೀಡುವಂತೆ ದೂರುದಾರರಿಗೆ ಪ್ರಚೋದನೆ ನೀಡಿದ್ದರು.
ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ, ಲೋಕಾಯುಕ್ತ/ಎಸಿಬಿ ಪೊಲೀಸರು ದಾಳಿ ನಡೆಸಿ ಮೂವರನ್ನೂ ಬಂಧಿಸಿದ್ದರು. ಆಗಿನ ಲೋಕಾಯುಕ್ತ ಇನ್ಸ್‌ಪೆಕ್ಟರ್ ಪ್ರಮೋದ ಸಿ. ಯಲಿಗಾರ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶ್ರೀ ಎಸ್.ಎಸ್. ಶಿವಳ್ಳಿ ಅವರು ಪ್ರಕರಣದ ವಾದ ಮಂಡಿಸಿದ್ದರು. ಮಾನ್ಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ, ಧಾರವಾಡ, ಸೆಪ್ಟೆಂಬರ್ 4 ರಂದು ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ, ಆರೋಪಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಈ ಶಿಕ್ಷೆ ವಿಧಿಸಿದ್ದಾರೆ.

