
ಧಾರವಾಡ: ಪೌರಕಾರ್ಮಿಕರ ಕಲ್ಯಾಣಕ್ಕೆ ಸಂಬಂಧಿಸಿದ ಅನುದಾನ ಹಾಗೂ ಸೌಲಭ್ಯಗಳಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ 3ನೇ ತ್ರೈಮಾಸಿಕ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆ ಹಾಗೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಪೌರಕಾರ್ಮಿಕರಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳಬೇಕು. ಕಾರ್ಮಿಕರ ಆರೋಗ್ಯ, ಸುರಕ್ಷತೆ ಹಾಗೂ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿ, ಬಾಕಿ ಇರುವ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೌರಕಾರ್ಮಿಕರ ಸೌಲಭ್ಯಗಳ ಪರಿಶೀಲನೆ
ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ನಿಯಮಾನುಸಾರ ದೊರೆಯಬೇಕಾದ ಕನಿಷ್ಠ ವೇತನ, ಇಎಸ್‌ಐ, ಪಿಎಫ್, ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಾರ್ಮಿಕರ ಸುರಕ್ಷತೆಗಾಗಿ ಅಗತ್ಯ ಪರಿಕರಗಳ ವಿತರಣೆ, ಗುಣಮಟ್ಟದ ಬೆಳಗಿನ ಉಪಹಾರ, ಗೃಹಭಾಗ್ಯ ಯೋಜನೆಯಡಿ ಮನೆಗಳ ಮಂಜೂರು ಹಾಗೂ ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ವಿಶ್ರಾಂತಿ ಗೃಹಗಳ ಕುರಿತು ಪರಿಶೀಲಿಸಿದರು. ಅಗತ್ಯವಿರುವ ಕಡೆಗಳಲ್ಲಿ ಹೊಸ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
31 ಮಂದಿಗೆ ಅನುಕಂಪದ ಆಧಾರದ ಮೇಲೆ ನೇಮಕ
ಡಿಸೆಂಬರ್ 2020ರಿಂದ ಈವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ನೇರ ವೇತನದಡಿ ಕಾರ್ಯನಿರ್ವಹಿಸುತ್ತಿದ್ದ 53 ಪೌರಕಾರ್ಮಿಕರು ಮೃತಪಟ್ಟಿದ್ದಾರೆ. ಅವರ ಅವಲಂಬಿತರಲ್ಲಿ ಒಬ್ಬರಿಗೆ ನೇರ ವೇತನದಡಿ ಪೌರಕಾರ್ಮಿಕರಾಗಿ ನೇಮಕಾತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ 44 ಪ್ರಸ್ತಾವನೆಗಳು ಸ್ವೀಕರಿಸಲಾಗಿದ್ದು, ಈವರೆಗೆ 31 ಮಂದಿಗೆ ನೇರ ಪಾವತಿ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆ ಎಂದು ತಿಳಿಸಿದರು. ಬಾಕಿ ಇರುವ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರ ಭದ್ರತೆಗಾಗಿ ಜೀವ ವಿಮೆ ಮಾಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಪಾರದರ್ಶಕ ಬಳಕೆಗೆ ಸೂಚನೆ
2026-27ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ ವಿವಿಧ ಇಲಾಖೆಗಳ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಮಂಜೂರಾಗಿರುವ ಅನುದಾನವನ್ನು ನಿಗದಿತ ಉದ್ದೇಶಕ್ಕೆ ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ಬಳಸಬೇಕು ಎಂದು ಸೂಚಿಸಿದರು.
ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಅನುದಾನದ ಬಳಕೆಯಲ್ಲಿ ಲೋಪ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು. ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಡಿಸಿಪಿ ಶೃತಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಧಾರವಾಡ ತಹಶೀಲ್ದಾರ (ಪ್ರ) ಡಾ. ಡಿ.ಎಚ್. ಹೂಗಾರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಜಿಲ್ಲಾ ಆರೋಗ್ಯ ಅಧಿಕಾರಿ ಪರಶುರಾಮ್ ಎಫ್.ಕೆ. ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಗಂಗಾಧರ ದೊಡ್ಡಮನಿ ನಿರೂಪಿಸಿ, ವಂದಿಸಿದರು.

