ನಾಗಮಂಗಲ: ಸೆ.24: ಜನಪದ ಸಾಹಿತ್ಯ ಮತ್ತು ಕಲೆ ನಮ್ಮ ಸಂಸ್ಕೃತಿಯ ಜೀವನಾಡಿಯಾಗಿದ್ದು, ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿಯ ಬಿಜಿಎಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 47ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಹಿರಿಯರು ನಡೆದು ಬಂದ ದಾರಿಯೇ ಜನಪದ. ಆ ಜನಪದದ ಜಾಡನ್ನು ಮರೆಯುವುದರಿಂದ ಬದುಕಿನ ಹಾದಿಯನ್ನೇ ತಪ್ಪಿದಂತಾಗುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಹಿಂದಿನ ಬೇರುಗಳನ್ನು ಮರೆತರೆ ಮುಂದಿನ ದಿನಗಳು ಸಂತಸದಾಯಕವಾಗಿರಲು ಸಾಧ್ಯವಿಲ್ಲ ಎಂದರು.
ತಂತ್ರಜ್ಞಾನದ ಯುಗದಲ್ಲಿ ಜನಪದದ ಅಗತ್ಯವಿದೆಯೇ ಎಂಬ ಪ್ರಶ್ನೆ ಎದುರಾದರೆ, ನಮ್ಮ ಹೊಸ ತಿಳಿವಿಗೆ ಜನಪದ ಹಳೆಯ ಬೇರು ಇದ್ದಂತೆ. ಬೇರು ಇಲ್ಲದೆ ಮರವಿಲ್ಲ. ಅದೇ ರೀತಿ ನಮ್ಮ ಸಂಸ್ಕೃತಿ ಮತ್ತು ಬದುಕಿನ ಮೂಲವನ್ನು ಅರಿಯದೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಜನಪದ ಸಾಹಿತ್ಯ ಪರಂಪರೆಯ ಕಲಾವಿದರು ಹಾಗೂ ಅವರ ಕಲೆಯನ್ನು ಪ್ರೋತ್ಸಾಹಿಸುವುದರ ಮೂಲಕ ಮಾತ್ರ ಜನಪದವನ್ನು ಉಳಿಸಿಕೊಳ್ಳಲು ಸಾಧ್ಯ. ಜನಪದ ಸಾಹಿತ್ಯದಲ್ಲಿ ಆರ್ದ್ರತೆ, ಕಾರುಣ್ಯ ಹಾಗೂ ಬದುಕಿನ ನೈಜ ಭಾವನೆಗಳು ಅಡಕವಾಗಿವೆ. ತಾಯಿಯೊಬ್ಬಳು ತನ್ನ ಮಗನಿಗೆ ನೀಡುವ ‘ಆಚಾರಕ್ಕೆ ಅರಸಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು’ ಎಂಬ ಆಶಯದಂತೆ ಜನಪದವು ನಮಗೆ ಸನ್ಮಾರ್ಗವನ್ನು ತೋರಿಸುತ್ತದೆ ಎಂದು ಬಣ್ಣಿಸಿದರು.
ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಶ್ರೀ ಆದಿಚುಂಚನಗಿರಿ ಮಠವು ಕಳೆದ ಸುಮಾರು 50 ವರ್ಷಗಳಿಂದ ಅನ್ನದಾಸೋಹ ಹಾಗೂ ಜ್ಞಾನದಾಸೋಹದ ಜೊತೆಗೆ ನೆಲಮೂಲ ಸಂಸ್ಕೃತಿ ಮತ್ತು ಜಾನಪದ ಕಲೆಗಳನ್ನು ಸಂರಕ್ಷಿಸಿ, ಪುನರುತ್ಥಾನಗೊಳಿಸುವ ಮಹತ್ತರ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದರು.
ಮಠವನ್ನು ನಿರ್ವಹಿಸುವುದು ಕಷ್ಟಕರವಾಗಿದ್ದ ಕಾಲದಲ್ಲಿಯೂ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರು ಜಾನಪದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸರ್ಕಾರಗಳಿಗೂ ಮಾರ್ಗದರ್ಶನ ನೀಡಿದ್ದರು. ಆಧುನಿಕತೆಯ ಪ್ರಭಾವದಿಂದಾಗಿ ನಮ್ಮ ನೆಲಮೂಲ ಸಂಸ್ಕೃತಿ ಹಾಗೂ ಜಾನಪದ ಕಲೆಗಳಿಗೆ ಪೆಟ್ಟು ಬಿದ್ದಿದೆ. ಇಂತಹ ಕಲೆಗಳು ಹಾಗೂ ಕಲಾವಿದರನ್ನು ಪೋಷಿಸಿ ನಮ್ಮ ಧರ್ಮ ಮತ್ತು ಭವ್ಯ ಪರಂಪರೆಯನ್ನು ಎತ್ತಿಹಿಡಿಯುವ ಕಾರ್ಯವನ್ನು ಮಠ ನಿರಂತರವಾಗಿ ನಡೆಸಿಕೊಂಡು ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಉದ್ಘಾಟನಾ ನುಡಿಗಳನ್ನಾಡಿ, ಮೂಲದ ಜ್ಞಾನವಿಲ್ಲದೆ ದೊಡ್ಡವರಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮೂಲ ವಿದ್ಯೆಯನ್ನು ಪುನರುಜ್ಜೀವನಗೊಳಿಸಿಕೊಳ್ಳಬೇಕು. ಮೂಲ ನೆಲೆಯನ್ನು ಗುರುತಿಸಿಕೊಂಡಾಗ ಮಾತ್ರ ಬದುಕು ಹಸನಾಗುತ್ತದೆ. ಬದುಕಿನ ಮೂಲ ನೆಲೆಯನ್ನು ಧನಾತ್ಮಕವಾಗಿ ಸೃಷ್ಟಿಸಿಕೊಳ್ಳಲು ಜಾನಪದದಿಂದ ಮಾತ್ರ ಸಾಧ್ಯ ಎಂದರು.
ಮಾತೃಹೃದಯಿ ಜಾನಪದ ಭಾಷೆಯನ್ನು ಮರೆಯುತ್ತಿರುವುದೇ ರಾಕ್ಷಸ ಸಂಸ್ಕೃತಿ ಸೃಷ್ಟಿಯಾಗಲು ಕಾರಣವಾಗುತ್ತಿದೆ. ಜಾನಪದದಲ್ಲಿರುವ ಸೌಹಾರ್ದ ಚಿಂತನೆ ಹಾಗೂ ಸಾಮರಸ್ಯದ ಬದುಕು ಮತ್ತೆ ಸಾಕಾರಗೊಳ್ಳಬೇಕು. ಜಾನಪದ ಕಲೆಗಳು ಬೀದಿಗೆ ಬೀಳುತ್ತಿದ್ದು, ಅವುಗಳ ಪುನರ್ ಸೃಷ್ಟಿ ಹಾಗೂ ಪುನರುಜ್ಜೀವನವಾಗಬೇಕಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ವಸುಂಧರ ಮಾತನಾಡಿ, ಜಾನಪದ ಎಲ್ಲ ಕಲೆಗಳ ತಾಯಿ ಬೇರು. ವೈಚಾರಿಕತೆ ಹಾಗೂ ಶ್ರೀಮಂತಿಕೆ ಮಡುವುಗಟ್ಟಿರುವುದು ಜಾನಪದ ಕಲೆಯಲ್ಲಿ. ಯುವ ಸಮುದಾಯ ಜಾನಪದ ಕಲೆಯಿಂದ ವಿಚಲಿತವಾಗುತ್ತಿರುವುದು ವಿಷಾದದ ಸಂಗತಿ. ಯುವಕರಿಗೆ ಪ್ರೋತ್ಸಾಹ ನೀಡಿ ಜಾನಪದ ಕಲೆಗಳತ್ತ ತೆರಳಲು ಅವಕಾಶ ಕಲ್ಪಿಸಬೇಕಿದೆ ಎಂದರು.
ಜಾನಪದ ಕಲಾವಿದರು ಅದೃಷ್ಟವಂತರು. ತಾಯಿ ಶಾರದೆಯ ಆಶೀರ್ವಾದ ಪಡೆದಿರುವ ನೀವು ಧನ್ಯರು. ನಾಡಿನ ವಿವಿಧ ಜಾನಪದ ಕಲಾ ಪ್ರಕಾರಗಳು ನಶಿಸದೆ ಉಳಿಯಲು ಆಶ್ರಯ ನೀಡುತ್ತಿರುವ ಶ್ರೀಮಠದ ಕಾರ್ಯ ಅನನ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಕಲಾ ಪೋಷಣೆಗೆ ಶ್ರೀಕ್ಷೇತ್ರವು ನಿರಂತರ ಬೆಂಬಲ ನೀಡುತ್ತಿದೆ. ಸುಮಾರು 45ರಿಂದ 50 ವರ್ಷಗಳ ಹಿಂದೆಯೇ ನಮ್ಮ ಭಾಗದ ಕಲಾವಿದರು ಜರ್ಮನಿ, ಪೋಲೆಂಡ್ ಸೇರಿದಂತೆ ಹಲವು ಯುರೋಪಿಯನ್ ರಾಷ್ಟ್ರಗಳಿಗೆ ತೆರಳಿ ತಮ್ಮ ಕಲಾ ಪ್ರದರ್ಶನ ನೀಡಿ ಕ್ಷೇತ್ರಕ್ಕೆ ಕೀರ್ತಿ ತಂದಿರುವ ಇತಿಹಾಸವಿದೆ ಎಂದರು.
ಸ್ಥಳೀಯ ಕಲಾವಿದರ ಪ್ರತಿಭೆಯನ್ನು ಅಂದೇ ಗುರುತಿಸಿದ್ದ ಪೂಜ್ಯ ಸ್ವಾಮೀಜಿಯವರು ಸುಮಾರು 47 ವರ್ಷಗಳ ಹಿಂದೆಯೇ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲು ತೀರ್ಮಾನಿಸಿದ್ದರು. ಅದರಂತೆ ರಾಜ್ಯದ ನಾನಾ ಭಾಗಗಳ ಕಲಾವಿದರನ್ನು ಕ್ಷೇತ್ರಕ್ಕೆ ಆಹ್ವಾನಿಸಿ, ಅವರಿಗೆ ಆತಿಥ್ಯ ನೀಡಿ ಕಲಾ ಪ್ರದರ್ಶನಕ್ಕೆ ಸೂಕ್ತ ಅನುಕೂಲ ಹಾಗೂ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ಅಂದಿನಿಂದಲೂ ಶ್ರೀಕ್ಷೇತ್ರವು ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಪ್ರಸ್ತುತ ಪೂಜ್ಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನ ಹಾಗೂ ಸಾರಥ್ಯದಲ್ಲಿ ಮುಂದೆಯೂ ಇಂತಹ ಕಲಾ ಕಾರ್ಯಕ್ರಮಗಳು ಇನ್ನಷ್ಟು ಯಶಸ್ವಿಯಾಗಿ ನಡೆಯಲಿವೆ ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ 85 ವರ್ಷದ ಜಾನಪದ ಹಾಡುಗಾರ್ತಿ ಚಿಕ್ಕಮಾದಮ್ಮ ಹಾಗೂ ರಾಮನಗರ ತಾಲ್ಲೂಕಿನ ಡಣಾಯಕನಪುರದ 86 ವರ್ಷದ ಪಟ ಕುಣಿತ ಕಲಾವಿದ ಕಾಡಪ್ಪ ಅವರನ್ನು ಗುರುತಿಸಿ, ತಲಾ ₹20 ಸಾವಿರ ನಗದು ಹಾಗೂ ಪಾರಿತೋಷಕ ಒಳಗೊಂಡ ನಾಡೋಜ ಎಚ್.ಎಲ್. ನಾಗೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಧರ್, ಕರ್ನಾಟಕ ರಾಜ್ಯ ಒಕ್ಕಲಿಗರ ಮೀಸಲಾತಿ ಆಯೋಗದ ಅಧ್ಯಕ್ಷ ಸಿ.ಎಂ. ನಾಗರಾಜ್, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

