ಅಕ್ಟೋಬರ್-ನವೆಂಬರ್‌ನಲ್ಲಿ ಮಹಿಳೆಯರಿಗಾಗಿ ‘ಸಮೃದ್ಧಿ ಶಕ್ತಿ’ ಯೋಜನೆ ಜಾರಿ: ಶಾಸಕ ಸಮೃದ್ಧಿ ಮಂಜುನಾಥ

Spread the love

ಮಳವಳ್ಳಿ: ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ‘ಸಮೃದ್ಧಿ ಶಕ್ತಿ’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ ತಿಳಿಸಿದರು.

ಪಟ್ಟಣದಲ್ಲಿನ ಗುರುವಾರದಂದು ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 36ನೇ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಯಾರಿಗೂ ಮೋಸ ಮಾಡಿಲ್ಲ. ಆದರೆ ಮಂಡ್ಯ ಜಿಲ್ಲೆಗೆ ಮೋಸ ಮಾಡಿದವರೇ ಹೆಚ್ಚು ಎಂಬ ಬೇಸರ ವ್ಯಕ್ತಪಡಿಸಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಸಮೃದ್ಧಿ ಸಂಸ್ಥೆ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರ ಆರ್ಥಿಕ ಅಭಿವೃದ್ಧಿಗೆ ನೆರವಾಗಲಾಗುತ್ತಿದೆ. ಮಹಿಳೆಯರು ಆರ್ಥಿಕವಾಗಿ ಬೆಳೆಯುವುದರೊಂದಿಗೆ ಸಂಸ್ಥೆಯೂ ಸಹ ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಜನರ ವಿಶ್ವಾಸವನ್ನು ಉಳಿಸಿಕೊಂಡು ಉತ್ತಮ ಸೇವೆ ನೀಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಹತೇಶ್, ಗೋಪಾಲ್, ವಿ.ಎಸ್. ಭಟ್, ಭಾರತೀ, ನವೀನಾಕ್ಷಿ, ಶಿವಣ್ಣ, ನಾಗೇಂದ್ರ, ರಾಜಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *