ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆ: ಸುರಕ್ಷತೆಗಾಗಿ ಮೈಸೂರು ಮೃಗಾಲಯಕ್ಕೆ ಸ್ಥಳಾಂತರ

Spread the love

ಹನೂರು: ತಾಯಿಯಿಂದ ಬೇರ್ಪಟ್ಟು ತಾಯಿಗಾಗಿ ಹಾತೊರೆಯುತ್ತಿದ್ದ ಸುಮಾರು ಒಂದು ತಿಂಗಳ ಆನೆಮರಿಯನ್ನು ಆರೋಗ್ಯ ಹಾಗೂ ಸುರಕ್ಷತೆ ದೃಷ್ಟಿಯಿಂದ ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ.

 

ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯದ ಹನೂರು–ಅಜ್ಜೀಪುರ ಮಾರ್ಗ ಮಧ್ಯದ ಮುಖ್ಯ ರಸ್ತೆಯಲ್ಲಿ ಮರಿ ಆನೆ ಪೀಳಿಕ್ಕುತ್ತಾ ತಾಯಿಯನ್ನು ಹುಡುಕುತ್ತಿದ್ದುದನ್ನು ವಾಹನ ಸವಾರರು ಗಮನಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಆನೆಮರಿಯನ್ನು ರಕ್ಷಿಸಿ ಸುರಕ್ಷಿತವಾಗಿ ವಶಕ್ಕೆ ಪಡೆದು ಆರೈಕೆ ಮಾಡಿದ್ದಾರೆ.

 

ತಾಯಿ ಆನೆಯನ್ನು ಪತ್ತೆಹಚ್ಚುವ ಉದ್ದೇಶದಿಂದ ಸೋಮವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಎರಡು ಡ್ರೋನ್‌ಗಳ ಮೂಲಕ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಲಾಗಿದೆ. ಆದರೆ, ಈ ವೇಳೆ ಆನೆಗಳ ಹಿಂಡು ಅಥವಾ ತಾಯಿ ಆನೆ ಎಲ್ಲಿಯೂ ಪತ್ತೆಯಾಗಿಲ್ಲ.

ಆನೆಮರಿ ಇನ್ನೂ ಒಂದು ತಿಂಗಳದ್ದಾಗಿರುವುದರಿಂದ ತಾಯಿಯೊಂದಿಗೆ ಸೇರುವವರೆಗೆ ಅದರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೈಸೂರು ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಮೃಗಾಲಯದಲ್ಲಿ ಆನೆಮರಿಗೆ ಅಗತ್ಯ ಆರೈಕೆ ಮತ್ತು ಪೋಷಣೆ ನೀಡಲಾಗುತ್ತಿದೆ.

ವರದಿ :ಕಾರ್ತಿಕ್ ಗೌಡ ಹನೂರು.

Leave a Reply

Your email address will not be published. Required fields are marked *