ನವಲಗುಂದ: ಹೆಸರು ಕಾಳು ಖರೀದಿ ಕೇಂದ್ರ ಆರಂಭಕ್ಕೆ ರೈತ ಮುಖಂಡರ ಆಗ್ರಹ

Spread the love

ನವಲಗುಂದ: ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆದಿದ್ದ ರೈತರು, ಅತಿಯಾದ ಮಳೆಯಿಂದಾಗಿ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಳಿದಿರುವ ಬೆಳೆಯನ್ನೂ ಕಟಾವು ಮಾಡಿದ ರೈತರ ಹೆಸರನ್ನು ಖರೀದಿಸಲು ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಮುಖಂಡ ಮಾಬುಸಾಬ್ ಯರಗುಪ್ಪಿ ಆಗ್ರಹಿಸಿದರು.

ಈ ಕುರಿತು ತಹಶೀಲ್ದಾರ್ ಸುಧೀರ್ ಸಾಹುಕಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, “ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಸರು ಕಾಳು ಪ್ರತಿ ಕ್ವಿಂಟಾಲ್‌ಗೆ ಕೇವಲ 3 ರಿಂದ 5 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ರೈತರ ಸಮಸ್ಯೆಯನ್ನು ತಿಳಿದಿದ್ದರೂ ಜನಪ್ರತಿನಿಧಿಗಳು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಮುಂದಾಗುತ್ತಿಲ್ಲ. ಸರ್ಕಾರ ಈ ಕೂಡಲೇ ವಿಳಂಬ ಮಾಡದೇ ಹೆಸರು ಕಾಳು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು” ಎಂದು ಒತ್ತಾಯಿಸಿದರು.

ಸಿರಾಜುದ್ದೀನ್ ಧಾರವಾಡ ಮಾತನಾಡಿ, “ಸರ್ಕಾರ ಹೆಸರು ಕಾಳು ಖರೀದಿ ಕೇಂದ್ರವನ್ನು ಆರಂಭಿಸಿ ಬೆಂಬಲ ಬೆಲೆಯಡಿ ಖರೀದಿಸಬೇಕು. ಒಂದು ಎಕರೆಗೆ ಹೆಸರು ಬೆಳೆ ಬೆಳೆದು ರಾಶಿ ಮಾಡಲು ಕನಿಷ್ಠ 15 ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಈಗ ಸೂಕ್ತ ಬೆಲೆ ಸಿಗುತ್ತಿಲ್ಲ. ವ್ಯಾಪಾರಿಗಳು ಹೇಳಿದ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ಹೀಗೆ ಮುಂದುವರಿದರೆ ರೈತರು ಬದುಕುವುದು ಹೇಗೆ? ದೇಶದ ಬೆನ್ನೆಲುಬು ಎನ್ನುವ ರೈತರ ಬೆನ್ನು ಮುರಿಯುವ ಕೆಲಸವನ್ನು ಆಳುವವರು ಮಾಡುತ್ತಿದ್ದಾರೆ. ಕೂಡಲೇ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದರು.

ಈ ಸಂದರ್ಭದಲ್ಲಿ ಮಹಮ್ಮದಲಿ ಮಿರ್ಜಿ, ನಿಂಗಪ್ಪ ಕುಂಬಾರ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *