ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ನಿಯಮಾನುಸಾರ ನೀಡಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

Spread the love

ಧಾರವಾಡ, ಆ.24: ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು ವಿತರಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನು ಮತ್ತು ನಿಯಮಾನುಸಾರ ಪ್ರಮಾಣಪತ್ರಗಳನ್ನು ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕೋರ್ಟ್ ಸಭಾಭವನದಲ್ಲಿ ಇಂದು ನಡೆದ ಜನನ–ಮರಣ ಹಾಗೂ ಬೆಳೆ ಅಂದಾಜು ಸಮೀಕ್ಷೆ ಮತ್ತು ಕೃಷಿ ಅಂಕಿ-ಅಂಶಗಳ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜನನ–ಮರಣ ಘಟನೆಗಳ ನೋಂದಣಿ ಸಂದರ್ಭದಲ್ಲಿ ತಂದೆ-ತಾಯಿಯ ಹೆಸರಿನ ಕಾಲಂನಲ್ಲಿ ಸಣ್ಣಪುಟ್ಟ ತಪ್ಪುಗಳು ಕಂಡುಬರುತ್ತಿವೆ. ಮರಣ ನೋಂದಣಿ ವೇಳೆ ಮರಣ ಹೊಂದಿದ ವ್ಯಕ್ತಿಯ ಆಧಾರ್ ಸಂಖ್ಯೆಯ ಬದಲಿಗೆ ಅರ್ಜಿದಾರರ ಆಧಾರ್ ಸಂಖ್ಯೆ ನಮೂದಿಸುವುದು, ನಮೂನೆ-4 ಹಾಗೂ ನಮೂನೆ-4ಎ ವೈದ್ಯಕೀಯ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡುವ ಬದಲಿಗೆ ಬೇರೆ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಹಾಗೂ ಜನನ ಮತ್ತು ಮರಣ ದಿನಾಂಕಗಳನ್ನು ದತ್ತಾಂಶ ನಮೂದಿಸುವ ಸಂದರ್ಭದಲ್ಲಿ ತಪ್ಪಾಗಿ ದಾಖಲಿಸುವ ಪ್ರಕರಣಗಳು ಕಂಡುಬರುತ್ತಿವೆ ಎಂದು ಅವರು ಹೇಳಿದರು.

ಜನನ–ಮರಣ ಪ್ರಮಾಣಪತ್ರ ವಿತರಿಸುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಪ್ರಮಾಣಪತ್ರ ವಿತರಿಸುವ ಕುರಿತು ಅಧಿಕಾರಿಗಳು ಸಿಬ್ಬಂದಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಲಭ್ಯವಿಲ್ಲದ ಜನನ ಪ್ರಮಾಣಪತ್ರವನ್ನು ನೀಡುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಜನನ ನೋಂದಣಿ ಲಭ್ಯವಿಲ್ಲದ ಪ್ರಕರಣಗಳಲ್ಲಿ ಸಂಬಂಧಪಟ್ಟ ಮಗುವಿನ ವಯಸ್ಸು ಹಾಗೂ ಇತರ ವಿವರಗಳನ್ನು ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಮಗುವನ್ನು ಖುದ್ದಾಗಿ ಪರಿಶೀಲಿಸಿ, ವಯಸ್ಸಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ತಾಳೆ ಮಾಡಿದ ಬಳಿಕವೇ ಪ್ರಮಾಣಪತ್ರ ನೀಡಬೇಕು ಎಂದು ಅವರು ತಿಳಿಸಿದರು.

ಪೋಷಕರು ಅಥವಾ ಅರ್ಜಿದಾರರು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಅವುಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸದೆ ಪ್ರಮಾಣಪತ್ರಗಳನ್ನು ವಿತರಿಸಿದರೆ ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಬೆಳೆ ಸಮೀಕ್ಷೆಯಡಿ ಸ್ಥಳೀಯ ಖಾಸಗಿ ನಿವಾಸಿಗಳಿಂದ ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸಲಾದ ಬೆಳೆ ವಿಸ್ತೀರ್ಣದ ಮಾಹಿತಿಯಲ್ಲಿ ಶೇ.1ರಷ್ಟನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು 83 ಗ್ರಾಮಗಳಲ್ಲಿ ಸೆಪ್ಟೆಂಬರ್ 20, 2026ರೊಳಗಾಗಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು.

ಮೊಬೈಲ್ ಆ್ಯಪ್ ಮೂಲಕ ಸಂಗ್ರಹಿಸಲಾದ ಬೆಳೆ ವಿಸ್ತೀರ್ಣದ ಮಾಹಿತಿಯಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ, ಮೇಲ್ವಿಚಾರಣೆ ಸಂದರ್ಭದಲ್ಲಿ ತಪ್ಪು ಬೆಳೆ ಮಾಹಿತಿಯನ್ನು ದಾಖಲಿಸಿರುವ ಪ್ರಾಧಿಕಾರ ಅಥವಾ ಸಿಬ್ಬಂದಿಯ ವಿವರಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಡಾ. ಪರಶುರಾಮ್ ಎಫ್.ಕೆ., ಅಪರ ಜಿಲ್ಲಾ ಜನನ–ಮರಣ ನೋಂದಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *