ಬಸ್ ಹಳ್ಳಕ್ಕೆ ಪಲ್ಟಿ: 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Spread the love

ಹರಪನಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಸೇತುವೆಯಿಂದ ಹಳ್ಳಕ್ಕೆ ಪಲ್ಟಿಯಾಗಿ ಬಿದ್ದ ಘಟನೆ ತಾಲೂಕಿನ ಅಣಜಿಗೆರೆ ಗ್ರಾಮದ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾವಣಗೆರೆಯಿಂದ ಉಚ್ಚಂಗಿದುರ್ಗ, ಮಾದಿಹಳ್ಳಿ ಮಾರ್ಗವಾಗಿ 28 ಪ್ರಯಾಣಿಕರನ್ನು ತುಂಬಿಕೊಂಡು ಹರಪನಹಳ್ಳಿ ಕಡೆಗೆ ಹೊರಟಿದ್ದ ‘ಬನಶಂಕರಿ’ ಖಾಸಗಿ ಬಸ್ ಈ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಅರಸೀಕೆರೆ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತಕ್ಕೆ ಸೇತುವೆಗೆ ತಡೆಗೋಡೆ ಇಲ್ಲದಿರುವುದು ಮತ್ತು ಕಳಪೆ ನಿರ್ಮಾಣವೇ ಕಾರಣ ಎಂದು ಸ್ಥಳೀಯರಾದ ಮಂಜುನಾಥ ಆರೋಪಿಸಿದ್ದಾರೆ. ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ಹೆಚ್ಚಾಗಿ ಹರಿಯುತ್ತದೆ. ಆದರೆ ಸೇತುವೆ ಕೆಳಗೆ ಸಣ್ಣ ಪ್ರಮಾಣದ ಪೈಪ್ ಅಳವಡಿಸಿರುವುದರಿಂದ ನೀರು ಸೇತುವೆ ಮೇಲೆ ಹರಿದು ಪಾಚಿ ಕಟ್ಟಿಕೊಂಡಿದೆ. ಇಂತಹ ಅವೈಜ್ಞಾನಿಕ ಕಾಮಗಾರಿಗಳು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿವೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *