
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಧ್ಯಕ್ಷ ಶ್ರೀನಿವಾಸ ಮಾನೆ ಅವರಿಗೆ ರಾಜ್ಯ ಸರ್ಕಾರ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಸ್ಥಾನಮಾನ ಅನ್ವಯವಾಗಲಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ರಾಜ್ಯಪಾಲರ ಆದೇಶಾನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆಗಸ್ಟ್ 17ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಶ್ರೀನಿವಾಸ ಮಾನೆ ಅವರಿಗೆ ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲಾ ಅಧಿಕೃತ ಸೌಲಭ್ಯಗಳನ್ನು ಕಲ್ಪಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ, ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀನಿವಾಸ ಮಾನೆ ಅವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನದೊಂದಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಮೂಲಕ ಗೃಹ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಮಾನೆ ಅವರಿಗೆ ಸರ್ಕಾರದಿಂದ ಸಂಪುಟ ದರ್ಜೆಯ ಸ್ಥಾನಮಾನ ದೊರೆತಂತಾಗಿದೆ.

