
ಕೋಲಾರ: ಸಾಲದ ಹೊರೆ ಹಾಗೂ ಬಡ್ಡಿದಾರರ ಕಿರುಕುಳಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಒಂದೇ ತಿಂಗಳ ಅವಧಿಯಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ವಂತ ಮನೆ ಕಟ್ಟುವ ಕನಸಿನಿಂದ ಸಾಲ ಮಾಡಿಕೊಂಡಿದ್ದ ಕುಟುಂಬ ಕೊನೆಗೆ ಸಾಲದ ಸುಳಿಗೆ ಸಿಲುಕಿ ದಾರುಣ ಅಂತ್ಯ ಕಂಡಿರುವುದು ಜಿಲ್ಲೆಯಾದ್ಯಂತ ಮರುಕ ಮೂಡಿಸಿದೆ.
ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಆಟೋ ಚಾಲಕ ಸುರೇಶ್ ಹಾಗೂ ಅವರ ಪತ್ನಿ ಪ್ರಮೀಳಾ ದಂಪತಿಗೆ ಇಬ್ಬರು ಮಕ್ಕಳಿದ್ದರು. ಕಷ್ಟಪಟ್ಟು ದುಡಿದು ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸುತ್ತಾ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ದಂಪತಿ, ಸ್ವಂತ ಮನೆ ಕಟ್ಟುವ ಕನಸಿನೊಂದಿಗೆ ₹15 ಲಕ್ಷ ಸಾಲ ಮಾಡಿಕೊಂಡಿದ್ದರು. ಆದರೆ ಕಾಲಕ್ರಮೇಣ ಸಾಲ ತೀರಿಸಲು ಸಾಧ್ಯವಾಗದೆ, ಬಡ್ಡಿ ದಂಧೆಕೋರರು ಹಾಗೂ ಸಾಲಗಾರರ ಕಿರುಕುಳ ಹೆಚ್ಚಾಗತೊಡಗಿತು. ಇದರಿಂದ ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿತ್ತು ಎಂದು ತಿಳಿದುಬಂದಿದೆ.
ಸಾಲಗಾರರ ಕಾಟ ತಾಳಲಾರದೆ ಜುಲೈ 24ರಂದು ಪ್ರಮೀಳಾ ಅವರು ತಮ್ಮ ಪುತ್ರಿ ಸ್ವಪ್ನಾ ಹಾಗೂ ಪುತ್ರ ಚರಣ್ ಅವರೊಂದಿಗೆ ಗ್ರಾಮದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳ ಮೃತದೇಹಗಳನ್ನು ಕಂಡ ಸುರೇಶ್ ತೀವ್ರ ಆಘಾತಕ್ಕೊಳಗಾಗಿದ್ದರು.
ಕುಟುಂಬದವರನ್ನು ಕಳೆದುಕೊಂಡ ದುಃಖದಿಂದ ಮನನೊಂದ ಸುರೇಶ್, “ನನ್ನವರೇ ಇಲ್ಲದ ಮೇಲೆ ಈ ಬದುಕು ನನಗೆ ಏಕೆ?” ಎಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಇಂದು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಒಂದೇ ತಿಂಗಳ ಅವಧಿಯಲ್ಲಿ ಕುಟುಂಬದ ನಾಲ್ವರೂ ಸಾವನ್ನಪ್ಪಿದಂತಾಗಿದೆ.
ಈ ದುರಂತದಿಂದ ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾಲದ ಹೆಸರಿನಲ್ಲಿ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಾಲದ ಸಮಸ್ಯೆ ಎದುರಾದಾಗ ಆತ್ಮಹತ್ಯೆಯಂತಹ ನಿರ್ಧಾರ ಪರಿಹಾರವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸಂಕಷ್ಟದಲ್ಲಿರುವವರು ಕಾನೂನುಬದ್ಧ ನೆರವು ಹಾಗೂ ಸಂಬಂಧಿತ ಅಧಿಕಾರಿಗಳ ಸಹಾಯ ಪಡೆಯುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಈ ಕುಟುಂಬದ ಸಾವಿಗೆ ಕಾರಣರಾದ ಬಡ್ಡಿ ದಂಧೆಕೋರರನ್ನು ಬಂಧಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸಂಬಂಧಿತ ಅಧಿಕಾರಿಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

