
ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿ: ಅಧಿಕಾರಿ ಮುನಿರಾಜು ಮನವಿ
ಹನೂರು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹನೂರು ತಾಲೂಕಿನಲ್ಲಿ 2026ರ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಆರಂಭಗೊಂಡಿದ್ದು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿ ಮುನಿರಾಜು, ತಾಲೂಕಿನಲ್ಲಿ ಒಟ್ಟು 2,24,616 ಮತದಾರರಿದ್ದು, ಪರಿಷ್ಕರಣೆಯ ಪೂರ್ವ ಅರ್ಹತಾ ಅವಧಿಯನ್ನು 2026ರ ಜೂನ್ 30ರಿಂದ ಆಗಸ್ಟ್ 8ರವರೆಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಇದೇ ಅವಧಿಯಲ್ಲಿ ಗೃಹಗೃಹ ಸಮೀಕ್ಷೆ ಕಾರ್ಯವೂ ನಡೆಯಲಿದ್ದು, ಕರಡು ಮತದಾರರ ಪಟ್ಟಿಯನ್ನು ಜುಲೈ 17, 2026ರಂದು ಪ್ರಕಟಿಸಲಾಗುತ್ತದೆ ಎಂದರು.
ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಹಾಗೂ ಹಕ್ಕು ದಾವೆಗಳನ್ನು ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಸಲ್ಲಿಸಬಹುದಾಗಿದೆ. ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಯನ್ನು ಅಕ್ಟೋಬರ್ 15ರೊಳಗೆ ಪೂರ್ಣಗೊಳಿಸಿ, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 19, 2026ರಂದು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಹನೂರು ತಾಲೂಕಿನ 2,24,616 ಅರ್ಹ ಮತದಾರರಲ್ಲಿ 1,75,519 ಮಂದಿ ಇ-ಕೆವೈಸಿ (EPIC/EF) ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಇದು ಶೇ.78.14ರಷ್ಟು ಪ್ರಗತಿಯಾಗಿದೆ ಎಂದು ತಿಳಿಸಿದರು. ಅಲ್ಲದೆ, ತಾಲೂಕಿನಲ್ಲಿ 100 ವರ್ಷ ಮೇಲ್ಪಟ್ಟ 18 ಮತದಾರರು, ಎಎಸ್‌ಎಸ್‌ಡಿ (ASSD) ವರ್ಗಕ್ಕೆ ಸೇರಿದ 10,291 ಮತದಾರರು, 4,686 ಮರಣ ಹೊಂದಿದ ಮತದಾರರು, 4,413 ಶಾಶ್ವತ ಸ್ಥಳಾಂತರಗೊಂಡವರು, 1,083 ಡಬಲ್ ಎಂಟ್ರಿಗಳು ಹಾಗೂ 15 ಇತರೆ ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಹೆಸರು ತೆಗೆದುಹಾಕುವ ಅಗತ್ಯವಿರುವ ಸಾರ್ವಜನಿಕರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹನೂರು ತಹಶೀಲ್ದಾರ್ ಚೈತ್ರಾ, ಉಪ ತಹಶೀಲ್ದಾರ್ ಸುರೇಖ, ಅಧಿಕಾರಿಗಳಾದ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಕಾರ್ತಿಕ್ ಗೌಡ, ಹನೂರು

