ಧಾರವಾಡದಲ್ಲಿ ಜಾನಪದ ಉತ್ಸವ ಸಂಭ್ರಮ: ಗ್ರಾಮೀಣ ಜಾನಪದ ಕಲೆಗಳ ಉಳಿವಿಗೆ ಒತ್ತಾಯ

Spread the love

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಮರೆವಾಡ ಗ್ರಾಮದ ಶ್ರೀ ಲಕ್ಷ್ಮೀದೇವಿ ಮಹಿಳಾ ಜಾನಪದ ಕಲಾ ಡೊಳ್ಳಿನ ಸಂಘದ ವತಿಯಿಂದ ಗ್ರಾಮೀಣ ಭಾಗದ ಜಾನಪದ ಕಲೆಗಳ ಸಂಭ್ರಮದ ಕಾರ್ಯಕ್ರಮ “ಜಾನಪದ ಉತ್ಸವ” ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ಅದ್ದೂರಿಯಾಗಿ ನಡೆಯಿತು. ಮರೆವಾಡ ಗ್ರಾಮದ ಪರಮಪೂಜ್ಯ ಶ್ರೀ ಶೇಖರಯ್ಯ ಹಿರೇಮಠ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ಕರ್ನಾಟಕ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಅವರು ಡೊಳ್ಳು ವಾದ್ಯ ಬಾರಿಸುವುದರ ಮೂಲಕ ಹಾಗೂ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ಸಂಸ್ಕೃತಿ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಗ್ರಾಮೀಣ ಜಾನಪದ ಕಲೆಗಳು ನಿಧಾನವಾಗಿ ನಶಿಸುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ಕಲಾವಿದರ ಅಭಿವೃದ್ಧಿಗೆ ಜಾನಪದ ಕಲೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವ ಅಗತ್ಯವಿದ್ದು, ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಗಳಿಗೆ ತಾವು ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಧಾರವಾಡ ಘಟಕದ ಕೋಶಾಧ್ಯಕ್ಷ ಸತೀಶ್ ತುರಮರಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ, ಜಿಲ್ಲೆಯ ಕಲಾವಿದರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಭಾಗದಲ್ಲಿ ಕಲಾವಿದರು ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಇಲಾಖೆಯಿಂದ ಅಗತ್ಯ ಸಹಕಾರ ಮತ್ತು ಅವಕಾಶ ಕಲ್ಪಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕೊಯಪ್ಪನವರ, ಮರೆವಾಡದ ಮಾಜಿ ಅಧ್ಯಕ್ಷ ಚನ್ನಬಸಪ್ಪ ಸಿ. ಮೊರಬದ, ಗ್ರಾಮದ ಹಿರಿಯರಾದ ಬಸವರಾಜ್ ಮಾದರ್, ಪರಮೇಶ್ವರ ಬಿ. ಮಾದರ್, ಸುನಿತಾ ಹಡಪದ್, ಆನಂದ ದ್ಯಾ ಮಾದರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮುದ್ದಪ್ಪ ಜಂಗಳಿ, ಬಸಪ್ಪ ಮಾದರ್, ಪರಶುರಾಮ ಮಾದರ್, ಮಲ್ಲಪ್ಪ ಲಕ್ಕಣ್ಣವರ್, ಶಂಕರಪ್ಪ, ಮಹಾದೇವಪ್ಪ ಗರಗದ, ಶ್ರೀಕಾಂತ್ ಬಬಲ್, ದ್ಯಾಮಣ್ಣ ಲಮಾಣಿ, ಶಿವಾನಂದ ಅಮರಶೆಟ್ಟಿ, ಭೀಮಸಿ ಕಬ್ಬೂರಕರ, ಲಕ್ಷ್ಮಪ್ಪ ಕಂಬಳನವರ್, ಧರ್ಮರಾಜ್ ಕಂಬಳೇನವರ್, ಹನುಮಂತಪ್ಪ ಮಾದರ್ ಸೇರಿದಂತೆ ಹಲವು ಜಾನಪದ ಕಲಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಪದಾಧಿಕಾರಿಗಳಾದ ಮಹಾದೇವಿ ದುರ್ಗವ್ವ ಮಾದರ್ ಕಾರ್ಯಕ್ರಮ ನಿರೂಪಿಸಿದರು. ಬಸವ ಮಾದರ್ ಅತಿಥಿಗಳನ್ನು ಸ್ವಾಗತಿಸಿದರೆ, ಶೋಭಾ ಕಂಬಳನ್ನವರ್ ವಂದನಾರ್ಪಣೆ ಸಲ್ಲಿಸಿದರು. ವೇದಿಕೆಯಲ್ಲಿ ಲಕ್ಷ್ಮಿ ಮಾದರ್, ರುದ್ರವ್ವ ಮಾದರ್, ಶಕೀಲವ್ವ ಮಾದರ್, ಎಲ್ಲಮ್ಮ ಮಾದರ್, ಬಸ್ಸು ಅಮೀನಭಾವಿ, ತಿಪ್ಪಣ್ಣ ಮಾದರ್ ಹಾಗೂ ಭೀಮಪ್ಪ ಭಜಂತ್ರಿ ಉಪಸ್ಥಿತರಿದ್ದರು.

ಬಳಿಕ ವಿವಿಧ ಕಲಾತಂಡಗಳಿಂದ ಡೊಳ್ಳು ಕುಣಿತ, ಕರಡಿ ವಾದ್ಯ, ಜಗ್ಗಲಿಗೆ, ಭಜನಾ ಪದ, ತತ್ವಪದ, ಸಂಪ್ರದಾಯ ಪದ ಸೇರಿದಂತೆ ವಿವಿಧ ಜಾನಪದ ಕಲಾ ಪ್ರದರ್ಶನಗಳು ನಡೆಯುವ ಮೂಲಕ ಜಾನಪದ ಉತ್ಸವಕ್ಕೆ ವಿಶೇಷ ಮೆರುಗು ದೊರೆಯಿತು.

Leave a Reply

Your email address will not be published. Required fields are marked *