
ಧಾರವಾಡ, ಜು.15: ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಧಾರವಾಡದ 7ನೇ ಘಟಿಕೋತ್ಸವ ಕಾರ್ಯಕ್ರಮವು ಜುಲೈ 18ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಐಐಟಿ ಧಾರವಾಡ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ಆರ್. ದೇಸಾಯಿ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದಲ್ಲಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ರಾಷ್ಟ್ರೀಯ ವಿಜ್ಞಾನ ಪೀಠಾಚಾರ್ಯ ಹಾಗೂ ಐಐಟಿ ದೆಹಲಿಯ ಮಾನ್ವಿತ ವಿದ್ಯುತ್ ಅಭಿಯಾಂತ್ರಿಕ ವಿಭಾಗದ ಪ್ರಾಧ್ಯಾಪಕ ಪ್ರೊ. ಭೀಮ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಟಾಟಾ ಪವರ್ ರಿನ್ಯೂವಬಲ್ ಮೈಕ್ರೋಗ್ರಿಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಜ್ ಗುಪ್ತಾ ಹಾಗೂ ಪ್ಯಾನ್ ಐಐಟಿ ಅಲ್ಯುಮ್ನಿ ಇಂಡಿಯಾದ ಅಧ್ಯಕ್ಷ ಪ್ರಭಾತ್ ಕುಮಾರ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಐಐಟಿ ಧಾರವಾಡ ಆಡಳಿತ ಮಂಡಳಿಯ ಅಧ್ಯಕ್ಷ ಶರದ್ ಕುಮಾರ್ ಸರಾಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಖ್ಯಾತ ಸಮಾಜಸೇವಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಹಾಗೂ ಲೇಖಕಿ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ರಾಷ್ಟ್ರಪತಿ ಭವನ ಹಾಗೂ ಕೇಂದ್ರ ಶಿಕ್ಷಣ ಇಲಾಖೆಯಿಂದ ಅಗತ್ಯ ಅನುಮತಿ ದೊರೆತಿದ್ದು, ಈ ಗೌರವವು ಧಾರವಾಡಕ್ಕೆ ವಿಶೇಷ ಹೆಗ್ಗುರುತಾಗಲಿದೆ ಎಂದು ಹೇಳಿದರು.
ಈ ಬಾರಿಯ ಘಟಿಕೋತ್ಸವದಲ್ಲಿ 2 ಚಿನ್ನದ ಪದಕ, 10 ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಅಲ್ಲದೆ, ಅತ್ಯುತ್ತಮ ವಿದ್ಯಾರ್ಥಿಗೆ ಓಂ ಪ್ರಕಾಶ್ ಗೊಯಲ್ ಮತ್ತು ಸೇವತಿ ದೇವಿ ಗೊಯಲ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಸಂಶೋಧನಾ ಸಾಧನೆಗಳ ಕುರಿತು ವಿವರಿಸಿದ ಅವರು, ಗ್ರಾಮೀಣ ಜೀವನೋಪಾಯ ಮತ್ತು ಅಭಿವೃದ್ಧಿ ಕೇಂದ್ರ (CoE-RLD) ಸ್ಥಾಪನೆಗೆ ₹15 ಕೋಟಿ ಮೌಲ್ಯದ ಯೋಜನೆ ಶಿಫಾರಸು ಮಾಡಲಾಗಿದೆ. ಪ್ರಧಾನಮಂತ್ರಿ ವಿಕಾಸ್ ಯೋಜನೆಯಡಿ ₹13.75 ಕೋಟಿ ಅನುದಾನ ದೊರೆತಿದ್ದು, ಕರ್ನಾಟಕ ಸರ್ಕಾರಿ ಶಾಲೆಗಳಿಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೆ ₹15 ಕೋಟಿ ಮಂಜೂರಾಗಿದೆ. ಮಹಿಳಾ ಸಬಲೀಕರಣ, ಸುಸ್ಥಿರ ತಂತ್ರಜ್ಞಾನ, ಗಾಳಿ ಶಕ್ತಿ ಹಾಗೂ ಅಪರೂಪದ ಭೂಮಿಯ ಲೋಹಗಳ ಸಂಶೋಧನೆಗೂ ಹೆಚ್ಚುವರಿ ಅನುದಾನ ಲಭಿಸಿದೆ ಎಂದು ತಿಳಿಸಿದರು.
ಧಾರವಾಡ ರಿಸರ್ಚ್ ಆ್ಯಂಡ್ ಟೆಕ್ನಾಲಜಿ ಇನ್ಕ್ಯುಬೇಟರ್ (ಧರ್ತಿ) ಫೌಂಡೇಶನ್ ಮೂಲಕ 20ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿಗೆ ಬೆಂಬಲ ನೀಡಲಾಗುತ್ತಿದ್ದು, 25 ಸಹಭಾಗಿತ್ವದ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡಲಾಗಿದೆ. ಬೋಧಕರ ಕಲ್ಯಾಣಕ್ಕಾಗಿ ಹೊಸ ಸಂಶೋಧನಾ ಅನುದಾನ, ಆಧುನಿಕ ವಸತಿ, ಡೇ ಕೇರ್, ವೆಲ್ನೆಸ್ ಕೇಂದ್ರ ಹಾಗೂ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಐಐಎಸ್ಸಿ, ಇಸ್ರೋ, ಎನ್ಆರ್ಎಸ್ಸಿ ಸೇರಿದಂತೆ ಹಲವು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಹಸಿರು ಕ್ಯಾಂಪಸ್ ಪರಿಕಲ್ಪನೆಯಡಿ 470 ಎಕರೆ ವಿಸ್ತೀರ್ಣದ ಆವರಣದಲ್ಲಿ ಮಳೆನೀರು ಸಂಗ್ರಹ, 1.8 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ, ತ್ಯಾಜ್ಯ ನೀರಿನ ಮರುಬಳಕೆ, ಭೂಗರ್ಭ ಜಲ ಮರುಪೂರಣ ಹಾಗೂ ಪರಿಸರ ಸ್ನೇಹಿ ಕಟ್ಟಡ ವಿನ್ಯಾಸಗಳನ್ನು ಅಳವಡಿಸಲಾಗಿದೆ. 2030ರೊಳಗೆ ನೀರು, ಇಂಧನ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ನೆಟ್-ಜೀರೋ ಗುರಿ ಸಾಧಿಸಲು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ (NIRF)-2025ರಲ್ಲಿ ಐಐಟಿ ಧಾರವಾಡ ದೇಶದ ಎಂಜಿನಿಯರಿಂಗ್ ಸಂಸ್ಥೆಗಳ ಪೈಕಿ 77ನೇ ಸ್ಥಾನ ಪಡೆದಿದ್ದು, ಮುಂದಿನ ವರ್ಷಗಳಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆಯುವ ಗುರಿ ಹೊಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ವಿಭಾಗದ ಡೀನ್ ಪ್ರೊ. ದಿಲೀಪ್ ಎ.ಡಿ., ಬೋಧಕ ವರ್ಗ ಕಲ್ಯಾಣ ವಿಭಾಗದ ಡೀನ್ ಪ್ರೊ. ರಂಜೀ ರೇಪಕ, ಶೈಕ್ಷಣಿಕ ಕಾರ್ಯಕ್ರಮಗಳ ಡೀನ್ ಪ್ರೊ. ನವೀನ್ ಎಂ.ಬಿ., ಮೂಲಸೌಕರ್ಯ ವಿಭಾಗದ ಡೀನ್ ಪ್ರೊ. ಅಮರನಾಥ್ ಹೆಗಡೆ, ಪ್ರೊ. ಪ್ರತ್ಯಾಸ ಭುಯಿ, ಹೊರವಲಯ, ಹಳೆಯ ವಿದ್ಯಾರ್ಥಿಗಳು ಹಾಗೂ ಕಾರ್ಪೊರೇಟ್ ಸಂಬಂಧಗಳ ಡೀನ್ ಪ್ರೊ. ಧೀರಜ್ ವಿ. ಪಾಟೀಲ್, ಆರ್ & ಡಿ ವಿಭಾಗದ ಡೀನ್ ಪ್ರೊ. ಕೋಟೇಶ್ವರರಾವ್ ಕೊಣ್ಡೇಪು, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಆರ್. ಪ್ರಭು, ಎಸ್ಡಬ್ಲ್ಯುಐ-ಕ್ಷೇಮ ವಿಭಾಗದ ಡೀನ್ ಪ್ರೊ. ರಿಧಿಮಾ ತಿವಾರಿ ದೇಸಾಯಿ, ಕುಲಸಚಿವ ಡಾ. ಕಲ್ಯಾಣ್ ಕುಮಾರ್ ಭಟ್ಟಾಚಾರ್ಜಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ. ವಿಜೇತ್ ಜೆ. ಕೊಟಗಿ ಉಪಸ್ಥಿತರಿದ್ದರು.

