
ಕುಂದಗೋಳ: ಬಡವನಿಗೆ ಹಸಿವಾದರೆ ಅನ್ನ ನೀಡಬೇಕಾದ, ಆಸರೆ ಕಳೆದುಕೊಂಡರೆ ಸೂಡು ಒದಗಿಸಬೇಕಾದ ವ್ಯವಸ್ಥೆಯೇ ಇವತ್ತು ಬಡವರ ಪಾಲಿಗೆ ಮೃತ್ಯುವಿನಂತೆ ಎರಗಿದೆ. ತಾಲೂಕಿನ ರಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಇಲಾಖೆಯ ಜಾಗದಲ್ಲಿ ದಶಕಗಳಿಂದ ನೆಮ್ಮದಿಯ ಗೂಡು ಕಟ್ಟಿಕೊಂಡಿದ್ದ 18ಕ್ಕೂ ಅಧಿಕ ಬಡ ಕುಟುಂಬಗಳು ಇಂದು ಅಕ್ಷರಶಃ ಬೀದಿ ಪಾಲಾಗಿವೆ. ತುತ್ತೂರಿ ಊದಬೇಕಾದ ಹಸುಗೂಸುಗಳನ್ನು ಕೈಯಲ್ಲಿ ಎತ್ತಿಕೊಂಡು, ಸುಡುಬಿಸಿಲು ಮತ್ತು ಅನಿಶ್ಚಿತತೆಯ ನಡುವೆ “ನಮಗೊಂದು ಸಣ್ಣ ಜಾಗ ಕೊಡಿ, ನಮ್ಮ ತಲೆಗೊಂದು ಸೂಡು ಕೊಡಿ” ಎಂದು ತಾಯಂದಿರು ಕಣ್ಣೀರಿಡುತ್ತಾ ಗೋಗರೆಯುತ್ತಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.
ಆದರೆ, ಬಡವರ ಈ ಆಕ್ರಂದನ, ಅಸಹಾಯಕತೆ ಮತ್ತು ಆರ್ತನಾದ ಮಾತ್ರ ಇಲ್ಲಿನ ಶಾಸಕರಿಗಾಗಲಿ ಅಥವಾ ಜನಪ್ರತಿನಿಧಿಗಳಿಗಾಗಲಿ ಕೇಳಿಸುತ್ತಲೇ ಇಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇವರಿಗೆ ನ್ಯಾಯ ಹೇಳುವವರು ಯಾರು ಮತ್ತು ಇವರ ಬದುಕಿಗೆ ದಾರಿ ತೋರುವವರು ಯಾರು ಎಂಬ ಪ್ರಶ್ನೆ ಇಡೀ ತಾಲೂಕನ್ನು ಕಾಡತೊಡಗಿದೆ.
ನಿಜಕ್ಕೂ ಇದು ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ತಪ್ಪೋ ಅಥವಾ ಕಂದಾಯ ಭೂಮಿಯಲ್ಲಿ ಬದುಕು ಕಟ್ಟಿಕೊಂಡ ಬಡ ಜನರ ತಪ್ಪೋ ಎಂಬ ಗೊಂದಲ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ರಟ್ಟಿಗೇರಿ ಗ್ರಾಮದ ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದೇ ಆಗಿದ್ದರೆ, ಕಂದಾಯ ಇಲಾಖೆಯವರು ಇಷ್ಟು ವರ್ಷಗಳ ಕಾಲ ಏನು ಮಾಡುತ್ತಿದ್ದರು? ಜಾಗ ತಮ್ಮದೇ ಆಗಿದ್ದರೆ ಅದನ್ನು ಮೊದಲೇ ತನ್ನ ಸುಪರ್ದಿಗೆ ತೆಗೆದುಕೊಂಡು, ಅಳತೆ ಮಾಡಿ, ಅಲ್ಲಿ ಸೂರು ಕಟ್ಟಿಕೊಳ್ಳುತ್ತಿದ್ದ ಬಡ ಜನರಿಗೆ ಮುಂಚಿತವಾಗಿಯೇ ಎಚ್ಚರಿಸಿ ತಿಳಿಸಬಹುದಾಗಿತ್ತಲ್ಲವೇ? ಇಷ್ಟು ವರ್ಷಗಳ ಕಾಲ ಕುಂಭಕರ್ಣ ನಿದ್ದೆಯಲ್ಲಿದ್ದ ಕಂದಾಯ ಇಲಾಖೆಗೆ ಈಗಲೇ ಯಾಕೆ ಜ್ಞಾನೋದಯವಾಗಿ ನೋಟಿಸ್ ನೀಡಿದೆ ಎನ್ನುವುದು ಸಾರ್ವಜನಿಕರ ದೊಡ್ಡ ಯಕ್ಷಪ್ರಶ್ನೆಯಾಗಿದೆ.
ಇನ್ನೊಂದು ಕಡೆ, ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದರೂ ಸಹ, ಸ್ಥಳೀಯ ಗ್ರಾಮ ಪಂಚಾಯಿತಿಯವರು ಇಷ್ಟು ವರ್ಷಗಳ ಕಾಲ ಅದನ್ನು ಯಾವ ಆಧಾರದ ಮೇಲೆ ತಮ್ಮ ದಾಖಲಾತಿಯಲ್ಲಿ ದಾಖಲಿಸಿಕೊಂಡು ಉತಾರ ನೀಡಿದರು? ಯಾವ ಹಕ್ಕಿನಿಂದ ಬಡವರಿಂದ ಮನೆ ಕರ ಹಾಗೂ ವರ್ಷ ವರ್ಷವೂ ತೆರಿಗೆಯನ್ನು ವಸೂಲಿ ಮಾಡಿದರು? ಇಲಾಖೆಗಳ ನಡುವೆ ಇಷ್ಟೆಲ್ಲಾ ಗೊಂದಲಗಳಿದ್ದರೂ ಜಿಲ್ಲೆಯ ಹಿರಿಯ ಅಧಿಕಾರಿಗಳಾದ ಧಾರವಾಡ ಉಪವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿಗಳು ಯಾಕೆ ಇದರ ಕಡೆಗೆ ಇಷ್ಟು ದಿನ ಗಮನ ಹರಿಸಲಿಲ್ಲ?
ಕಂದಾಯ ಇಲಾಖೆಯ ಇಂತಹದ್ದೇ ನಿರ್ಲಕ್ಷ್ಯದಿಂದಾಗಿ ಇಂದು ಕುಂದಗೋಳ ತಾಲೂಕಿನಾದ್ಯಂತ ಎಷ್ಟೋ ಕಂದಾಯ ಜಾಗಗಳು ಕಣ್ಣೆದುರೇ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಕಣ್ತೆರೆದು ನೋಡುತ್ತಿಲ್ಲ. ಇಡೀ ತಾಲೂಕಿನಲ್ಲಿ ನೂರಾರು ಎಕರೆ ಕಂದಾಯ ಜಾಗ ಒತ್ತುವರಿಯಾಗಿದ್ದರೂ, ಅಧಿಕಾರಿಗಳ ಕಣ್ಣಿಗೆ ಕೇವಲ ರಟ್ಟಿಗೇರಿ ಗ್ರಾಮದ ಈ 18 ಬಡ ಕುಟುಂಬಗಳ ಸಣ್ಣ ಸೂರಿನ ಜಾಗ ಮಾತ್ರ ಒತ್ತುವರಿಯಾದಂತೆ ಕಾಣತೊಡಗಿದ್ದೇಕೆ? ಎಂಬದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು, ಇದು ಬಡವರ ಮೇಲಿನ ದರ್ಪವಲ್ಲದೆ ಮತ್ತೇನು? ಇಷ್ಟು ದಿನಗಳ ಕಾಲ ಕನಿಷ್ಠ ಉಪವಿಭಾಗಾಧಿಕಾರಿಗಳಾದರೂ (ಎಸಿ) ಈ ಅನ್ಯಾಯದ ಕಡೆಗೆ ಕಣ್ಣು ಹಾಯಿಸದೇ ಹೋದದ್ದು ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಎಂಬುದು ಸಾರ್ವಜನಿಕರ ನೇರ ಆರೋಪವಾಗಿದೆ.
ಕಳೆದ 2018ರಲ್ಲಿ ಮಂಜೂರಾಗಿದ್ದ ಗಾಂಧಿ ವಸತಿ ಶಾಲೆಯ ನಿರ್ಮಾಣಕ್ಕೆ ಸೂಕ್ತ ಜಾಗ ಬೇಕೆಂಬ ಒಂದೇ ಒಂದು ಕಾರಣವನ್ನು ಮುಂದಿಟ್ಟುಕೊಂಡು, ಇತ್ತೀಚೆಗೆ ತಾಲೂಕು ಆಡಳಿತವು ಯಾವುದೇ ಮುನ್ಸೂಚನೆ ಅಥವಾ ಪರ್ಯಾಯ ವ್ಯವಸ್ಥೆ ಮಾಡದೆ ಜೆಸಿಬಿ ಯಂತ್ರಗಳೊಂದಿಗೆ ಬಂದು ಈ ಬಡವರ ಮನೆಗಳನ್ನು ಧ್ವಂಸಗೊಳಿಸಿದೆ. ಕಾಲು ಶತಮಾನ ಕಾಲ ಪ್ರೀತಿಯಿಂದ ಕಟ್ಟಿಕೊಂಡಿದ್ದ ಮನೆಗಳು ಕಣ್ಣೆದುರೇ ಮಣ್ಣುಪಾಲಾಗುತ್ತಿದ್ದರೆ, ಅಲ್ಲಿನ ನಿವಾಸಿಗಳು ಅಸಹಾಯಕರಾಗಿ ಕಣ್ಣೀರು ಸುರಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗಲಿಲ್ಲ.
ಇದರ ನೇರ ಪರಿಣಾಮವಾಗಿ ಇಂದು ಅಂದಾಜು ಹದಿನೆಂಟಕ್ಕೂ ಹೆಚ್ಚು ಕುಟುಂಬಗಳು ಬೀದಿಯಲ್ಲಿ ನಿಂತು ದಿನದೂಡುವಂತಾಗಿದೆ. ಇಷ್ಟೆಲ್ಲಾ ಅನಾಹುತ ನಡೆದು ಬಡವರ ಸಂಸಾರಗಳು ಬೀದಿಗೆ ಬಿದ್ದಿದ್ದರೂ, ಅಂದು ಆಸ್ತಿ ಪತ್ರ ನೀಡಿ ಕರ ವಸೂಲಿ ಮಾಡಿದ್ದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ತಾಲೂಕು ಆಡಳಿತ ಇವತ್ತು ಏನೂ ಅರಿಯದವರಂತೆ ಗಪ್‌ಚುಪ್ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಜನಪ್ರತಿನಿಧಿಗಳ ಮೌನದ ಜೊತೆಗೆ ಜಿಲ್ಲಾಡಳಿತವೂ ಸಹ ಈ ಕಡೆ ಕಣ್ತೆರೆದು ನೋಡದೇ ಇರುವುದು ದುರಂತದ ಪರಮಾವಧಿಯಾಗಿದೆ. ಈ ಇಡೀ ದುರಂತದ ಬೆನ್ನಲ್ಲೇ ಸ್ಥಳೀಯ ಸಾರ್ವಜನಿಕರು ಮತ್ತು ಸಂತ್ರಸ್ತರು ಇವತ್ತು ನೇರವಾಗಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ.
ಕೇಂದ್ರ ಸಚಿವರೂ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರೂ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು, ಕುಂದಗೋಳ ಕ್ಷೇತ್ರದ ಶಾಸಕರೇ ಹಾಗೂ ಸ್ಥಳೀಯ ರಾಜಕೀಯ ಮುಖಂಡರೇ, ನಿಮ್ಮದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬಡವರ ಬದುಕು ಹೀಗೆ ಬೀದಿಗೆ ಬಂದು ತರಗೆಲೆಯಂತೆ ತತ್ತರಿಸುತ್ತಿದ್ದರೂ ನೀವು ಯಾಕೆ ಮೌನಕ್ಕೆ ಶರಣಾಗಿದ್ದೀರಿ ಎಂದು ಇವತ್ತು ಇಡೀ ಜನತೆ ನಿಮ್ಮನ್ನು ಪ್ರಶ್ನಿಸುತ್ತಿದೆ.
ಈ ಗ್ರಾಮದ ಬಡ ಜನರಿಂದ ತಮಗೆ ಒಂದು ಮತವೂ ಬಂದಿಲ್ಲವಾ ಹೇಗೆ ಎಂದು ಸಾರ್ವಜನಿಕರು ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ವೋಟಿಗಾಗಿ ಕೈಮುಗಿದು ಬರುವ ಜನಪ್ರತಿನಿಧಿಗಳಾದ ನೀವು, ಇಂದು ಇಷ್ಟೊಂದು ದೊಡ್ಡ ದುರಂತ ಸಂಭವಿಸಿದ್ದರೂ ಕನಿಷ್ಠ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿಲ್ಲ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ತೀವ್ರವಾಗಿ ಖಂಡಿಸುತ್ತಿದ್ದಾರೆ.
ಬೀದಿಗೆ ಬಿದ್ದಿರುವ ಈ ಸಂತ್ರಸ್ತರ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಇನ್ನು ನಮಗೆ ಬದುಕಲು ದಾರಿಯೇ ಇಲ್ಲದಂತಾಗಿದೆ. “ದಯವಿಟ್ಟು ನಮಗೆ ದಯಾಮರಣ ಕೊಡಿ ಅಥವಾ ವಿಷಕೊಟ್ಟು ನಮಗೆ ಸಾವಿಗೆ ದಾರಿ ಮಾಡಿಕೊಡಿ” ಎಂದು ಅಲ್ಲಿನ ಸೂರಿಲ್ಲದ ಬಡ ಜೀವಗಳು ಕಣ್ಣೀರಿಡುತ್ತಾ ವ್ಯವಸ್ಥೆಯ ಮುಂದೆ ಅಂಗಲಾಚುತ್ತಿವೆ. ಬಡವರ ಈ ಆಕ್ರಂದನ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಇನ್ನಾದರೂ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು (ಎಸಿ) ಸ್ಥಳಕ್ಕೆ ಬಂದು ಖುದ್ದಾಗಿ ಪರಿಶೀಲನೆ ನಡೆಸಿ ಬಡವರ ಪರವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತಾರಾ, ಅಥವಾ ಸಾವಿನ ದಾರಿ ತೋರಿಸಿ ಎಂದು ಬೇಡುತ್ತಿರುವ ಈ ಅಸಹಾಯಕ ಕುಟುಂಬಗಳಿಗೆ ತಕ್ಷಣವೇ ಪರ್ಯಾಯ ಸೂರು ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯಕ್ಕೆ ಈ ಕುಟುಂಬಗಳು ತಮಗೆ ನ್ಯಾಯ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪರ್ಯಾಯ ವಸತಿ ಕಲ್ಪಿಸದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ತೀವ್ರ ಎಚ್ಚರಿಕೆಯನ್ನು ನೀಡಿದ್ದಾರೆ.

