
ಧಾರವಾಡ: ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಜುಲೈ 11ರಂದು ಹಿರಿಯ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ ಅವರ ನೇತೃತ್ವದಲ್ಲಿ ದ್ವಿತೀಯ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ನಡೆಯಿತು. ನ್ಯಾಯಮೂರ್ತಿಗಳಾದ ಸಚಿನ್ ಶಂಕರ ಮಗದುಮ್, ಸಿ.ಎಂ. ಪೂನಚ್ಚ ಹಾಗೂ ಗೀತಾ ಕೆ.ಬಿ. ಅವರೊಂದಿಗೆ ಲೋಕ ಅದಾಲತ್ ಸದಸ್ಯರಾದ ಕೆ.ಎಲ್. ಪಾಟೀಲ, ಸಾಜಿದ್ ಗೂಡವಾಲಾ, ಎಂ.ಎಸ್. ಹಳ್ಳಿಕೇರಿ ಮತ್ತು ವಿದ್ಯಾವತಿ ಕೊಟ್ಟೂರಶೆಟ್ಟರ್ ಪಾಲ್ಗೊಂಡಿದ್ದು, ಒಟ್ಟು ನಾಲ್ಕು ಪೀಠಗಳನ್ನು ರಚಿಸಲಾಗಿತ್ತು.
ಲೋಕ ಅದಾಲತ್‌ನಲ್ಲಿ ಒಟ್ಟು 1,037 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ 366 ಪ್ರಕರಣಗಳನ್ನು ₹16,62,34,920 ಮೊತ್ತಕ್ಕೆ ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು. ಅಪಘಾತ ಪರಿಹಾರ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು ಸೇರಿದಂತೆ ವಿವಿಧ ಸ್ವರೂಪದ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲಾಯಿತು.

ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಮಾಲಿಕರು ಹಾಗೂ ಸರ್ಕಾರ ಸಲ್ಲಿಸಿದ್ದ 46 ಮೇಲ್ಮನವಿಗಳನ್ನು ಕರ್ನಾಟಕ ಸರ್ಕಾರದ 2025ರ ಅಕ್ಟೋಬರ್ 9ರ ಆದೇಶದಂತೆ ಒಂದು ಎಕರೆ ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನಿಗದಿಪಡಿಸಿರುವ ಆಧಾರದ ಮೇಲೆ ಭೂಮಿ ಕಳೆದುಕೊಂಡ ರೈತರು ಮತ್ತು ಭೂಸ್ವಾಧೀನ ಅಧಿಕಾರಿಗಳ ನಡುವೆ ಸಮಾಲೋಚನೆ ನಡೆಸಿ ಇತ್ಯರ್ಥಪಡಿಸಲಾಯಿತು.
ಇದಲ್ಲದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಸಂಬಂಧಿಸಿದ ಪ್ರಕರಣಗಳು, ಹಲವು ರಿಟ್ ಅರ್ಜಿಗಳು ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಎರಡು ಹಳೆಯ ಮೇಲ್ಮನವಿ ಪ್ರಕರಣಗಳನ್ನೂ ರಾಜಿ ಮೂಲಕ ಇತ್ಯರ್ಥಗೊಳಿಸಲಾಯಿತು. ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಉತ್ತಮವಾಗಿ ಕಾಪಾಡಿಕೊಳ್ಳುವಂತೆ ಉಭಯ ಪಕ್ಷಗಳಿಗೆ ಸಲಹೆ ನೀಡಲಾಯಿತು ಎಂದು ಧಾರವಾಡ ಪೀಠದ ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಅಧೀಕ ವಿಲೇಖನಾಧಿಕಾರಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

