
ಹಾವೇರಿ: ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ದುರುಪಯೋಗಪಡಿಸಿಕೊಂಡಿರುವ ಕಳ್ಳರು, ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಂ ಬ್ಯಾರೇಜ್ಗಳ ಕಬ್ಬಿಣದ ಗೇಟ್ಗಳನ್ನು ಕಳ್ಳತನ ಮಾಡಿದ್ದಾರೆ. ಹಾವೇರಿ ತಾಲೂಕಿನ ಕೋಳೂರು ಗ್ರಾಮದಲ್ಲಿ ಒಂದುವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸುಮಾರು 98 ಗೇಟ್ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇಲಾಖೆಯ ನಿರ್ಲಕ್ಷ್ಯವೇ ಕಳ್ಳರ ಕರಾಮತ್ತಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕಳ್ಳತನ ನಡೆದಿರುವುದು ಇದೇ ಮೊದಲಲ್ಲ. ಕಳೆದ ಆರು-ಏಳು ತಿಂಗಳಿನಿಂದ ಜಿಲ್ಲೆಯಲ್ಲಿ ಈ ರೀತಿ ನಿರಂತರವಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ಗಳ ಕಳ್ಳತನ ನಡೆಯುತ್ತಿದೆ.
ಹಾವೇರಿಯ ವರದಾ ನದಿಗೆ ಅಡ್ಡಲಾಗಿ ಸುಮಾರು 14ಕ್ಕೂ ಅಧಿಕ ಬ್ರಿಡ್ಜ್ ಕಂ ಬ್ಯಾರೇಜ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಸಾಮಾನ್ಯವಾಗಿ ಮಳೆಗಾಲ ಮುಗಿದ ನಂತರ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಬ್ರಿಡ್ಜ್ ಕಂ ಬ್ಯಾರೇಜ್ಗಳಿಗೆ ಅಳವಡಿಸಿದ್ದ ಗೇಟ್ಗಳನ್ನು ತೆಗೆದು ಗೋದಾಮಿನಲ್ಲಿ ಇಡುವುದು ಸಾಮಾನ್ಯ ನಿಯಮ.
ಈ ಸಂಗತಿಯನ್ನು ಅರಿತಿದ್ದ ಖದೀಮರು, ರಾತ್ರೋರಾತ್ರಿ ಗೋದಾಮಿನಲ್ಲಿದ್ದ 98 ಗೇಟ್ಗಳನ್ನು ಕದ್ದೊಯ್ದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಮೂರು ಕಡೆ ಈ ರೀತಿ ಬ್ಯಾರೇಜ್ ಗೇಟ್ಗಳ ಕಳ್ಳತನ ನಡೆದಿದೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

