ತೂಗು ಸೇತುವೆ ಮನುಷ್ಯ’ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ನಿಧನ: ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಯ ರೂವಾರಿ ಇನ್ನಿಲ್ಲ

Spread the love

ದಕ್ಷಿಣ ಕನ್ನಡ: ದೇಶಾದ್ಯಂತ ‘ಭಾರತದ ಸೇತುವೆ ಮನುಷ್ಯ’ (Bridge Man of India) ಹಾಗೂ ತೂಗು ಸೇತುವೆಗಳ ನಿರ್ಮಾಣದ ಮೂಲಕ ಗ್ರಾಮೀಣ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ನಿಧನರಾದರು. ಕೆಲ ದಿನಗಳ ಹಿಂದೆ ಉತ್ತರಾಖಂಡದ ಪವಿತ್ರ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಪತ್ನಿ ಉಷಾ ಅವರನ್ನು ಈಗಾಗಲೇ ಕಳೆದುಕೊಂಡಿದ್ದ ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ.

1950ರ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು ಗ್ರಾಮದಲ್ಲಿ ಜನಿಸಿದ ಡಾ. ಗಿರೀಶ್ ಭಾರದ್ವಾಜ್, 1973ರಲ್ಲಿ ಮಂಡ್ಯದ ಪಿ.ಇ.ಎಸ್. ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಉನ್ನತ ವಿದ್ಯಾಭ್ಯಾಸದ ಬಳಿಕ ದೊಡ್ಡ ನಗರ ಅಥವಾ ವಿದೇಶಗಳಿಗೆ ತೆರಳದೆ ತಮ್ಮ ಹುಟ್ಟೂರಿನಲ್ಲೇ ಉಳಿದು ವರ್ಕ್‌ಶಾಪ್ ಆರಂಭಿಸಿ ಗ್ರಾಮೀಣ ಜನರ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡರು.

1989ರಲ್ಲಿ ಅರಂಬೂರು ಗ್ರಾಮದ ಜನರಿಗೆ ಪಯಸ್ವಿನಿ ನದಿಯ ಕಾರಣ ಸುಳ್ಯ ಪಟ್ಟಣದೊಂದಿಗೆ ಸಂಪರ್ಕ ಸಾಧಿಸಲು ಆಗುತ್ತಿದ್ದ ತೊಂದರೆ ಅವರಿಗೆ ಹೊಸ ದಾರಿಯನ್ನು ತೋರಿಸಿತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅವರು ಕಡಿಮೆ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಮೊದಲ ಸೇತುವೆಯನ್ನು ನಿರ್ಮಿಸಿದರು. ಅಲ್ಲಿಂದ ಆರಂಭವಾದ ಅವರ ಪಯಣ ದೇಶದ ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವದ ಚಳವಳಿಯಾಗಿ ಬೆಳೆದಿತು.

ಡಾ. ಗಿರೀಶ್ ಭಾರದ್ವಾಜ್ ಅವರ ಸೇವೆ ಕೇವಲ ತಾಂತ್ರಿಕ ಕಾರ್ಯಕ್ಕೆ ಸೀಮಿತವಾಗಿರಲಿಲ್ಲ. ಸೇತುವೆ ನಿರ್ಮಾಣದ ಸರ್ವೇ, ವಿನ್ಯಾಸ ಹಾಗೂ ತಾಂತ್ರಿಕ ಸಲಹೆಗಳಿಗೆ ಅವರು ಯಾವುದೇ ಸಂಭಾವನೆ ಪಡೆಯುತ್ತಿರಲಿಲ್ಲ. ಅನೇಕ ಗ್ರಾಮಗಳಲ್ಲಿ ಹಣದ ಕೊರತೆ ಇದ್ದಾಗ ಸ್ವಂತ ಖರ್ಚಿನಿಂದಲೇ ಸೇತುವೆ ನಿರ್ಮಿಸಿಕೊಟ್ಟ ಉದಾಹರಣೆಗಳೂ ಇವೆ. ಪ್ರತಿಯೊಂದು ಗ್ರಾಮವೂ ಸ್ವಾವಲಂಬಿಯಾಗಬೇಕು ಹಾಗೂ ಸ್ಥಳೀಯರೇ ಸೇತುವೆಗಳ ನಿರ್ವಹಣೆ ಮಾಡಬೇಕು ಎಂಬುದು ಅವರ ಆಶಯವಾಗಿತ್ತು.

ಅವರ ಪರಿಣತಿಯನ್ನು ಭಾರತೀಯ ಸೇನೆಯೂ ಗುರುತಿಸಿತ್ತು. ಜಮ್ಮು-ಕಾಶ್ಮೀರದ ದುರ್ಗಮ ಪ್ರದೇಶಗಳಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಭಾರತೀಯ ಸೇನೆ ಅವರ ತಾಂತ್ರಿಕ ಮಾರ್ಗದರ್ಶನವನ್ನು ಪಡೆದುಕೊಂಡಿತ್ತು. ಗ್ರಾಮೀಣ ಭಾರತದ ಸಂಪರ್ಕ ವ್ಯವಸ್ಥೆಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಭಾರತ ಸರ್ಕಾರ 2017ರಲ್ಲಿ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದರ ಜೊತೆಗೆ ಹಲವು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಮತ್ತು ಸಮ್ಮಾನಗಳು ಅವರಿಗೆ ಸಂದಿದ್ದವು.

ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದಿಂದ ಗ್ರಾಮೀಣ ಅಭಿವೃದ್ಧಿ, ತಂತ್ರಜ್ಞಾನ ಹಾಗೂ ಸಮಾಜಸೇವಾ ಕ್ಷೇತ್ರ ಅಪರೂಪದ ಸಾಧಕನನ್ನು ಕಳೆದುಕೊಂಡಿದೆ. ಸಾವಿರಾರು ಗ್ರಾಮಗಳಿಗೆ ಸೇತುವೆಗಳ ಮೂಲಕ ಹೊಸ ಬದುಕಿನ ದಾರಿ ತೋರಿದ ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ.

Leave a Reply

Your email address will not be published. Required fields are marked *