ರಸಗೊಬ್ಬರ ಕೊರತೆ ನಿರ್ವಹಣೆ ಹಾಗೂ ಪರ್ಯಾಯ ಗೊಬ್ಬರ ಬಳಕೆ ಕುರಿತು ರೈತರಿಗೆ ಒಂದು ದಿನದ ಕಾರ್ಯಾಗಾರ

Spread the love

ಧಾರವಾಡ: ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ರಸಗೊಬ್ಬರ ಕೊರತೆ ನಿರ್ವಹಣೆ ಹಾಗೂ ಪರ್ಯಾಯ ವ್ಯವಸ್ಥೆ ಕುರಿತು ರೈತರಿಗೆ ಒಂದು ದಿನದ ಕಾರ್ಯಾಗಾರವನ್ನು ಭಾನುವಾರ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಯಿತು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಸೋಮನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಉದ್ಘಾಟಿಸಿ ಮಾತನಾಡಿ, ರೈತರು ಕೇವಲ ರಾಸಾಯನಿಕ ಗೊಬ್ಬರಗಳನ್ನೇ ಅವಲಂಬಿಸದೆ ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸಮತೋಲಿತ ಗೊಬ್ಬರ ಬಳಕೆಯೊಂದಿಗೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ ಮಳೆ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಹವಾಮಾನಕ್ಕೆ ಅನುಗುಣವಾಗಿ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಬೇಸಾಯ ವಿಜ್ಞಾನಿ ಡಾ. ಬಸವರಾಜ ಏಣಗಿ ಮಾತನಾಡಿ, ರೈತರು ಆಧುನಿಕ ಕೃಷಿಯ ಭರಾಟೆಯಲ್ಲಿ ಮೂಲ ಕೃಷಿ ಪದ್ಧತಿಗಳನ್ನು ಮರೆಯಬಾರದು. ಕೇವಲ ಡಿಎಪಿ ಮತ್ತು ಯೂರಿಯಾ ಗೊಬ್ಬರಗಳ ಮೇಲೆ ಅವಲಂಬಿತರಾಗದೆ 12:32:16, 10:26:26 ಹಾಗೂ 20:20:0:13 ಮುಂತಾದ ಪರ್ಯಾಯ ಗೊಬ್ಬರಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ಕೇವಲ ಬೆಳೆ ಬೆಳೆಯುವುದಕ್ಕಷ್ಟೇ ಸೀಮಿತವಾಗದೆ ಹೈನುಗಾರಿಕೆ, ಆಡು-ಕುರಿ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಸೇರಿದಂತೆ ಉಪಕಸುಬುಗಳನ್ನು ಅಳವಡಿಸಿಕೊಂಡು ಸಮಗ್ರ ಕೃಷಿಯ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.

ಮಣ್ಣು ವಿಜ್ಞಾನಿ ಡಾ. ಪಲ್ಲವಿ ಉಪನ್ಯಾಸ ನೀಡಿ, ಮಣ್ಣು ಪರೀಕ್ಷೆ ನಡೆಸದೆ ಅತಿಯಾದ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುವುದರಿಂದ ಮಣ್ಣಿನ ಗುಣಧರ್ಮ ಹಾಗೂ ಫಲವತ್ತತೆ ಹಾಳಾಗುವುದಲ್ಲದೆ, ಬೆಳೆಗಳ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಿಸಿ ಇಳುವರಿ ಕುಂಠಿತಗೊಳ್ಳುತ್ತದೆ ಎಂದು ಎಚ್ಚರಿಸಿದರು. ಆದ್ದರಿಂದ ರೈತರು ಶಿಫಾರಸು ಮಾಡಿದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಬಳಸಬೇಕು ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಾಳಪ್ಪ ಬೆಳಕೊಡ ಮಾತನಾಡಿ, ರೈತರು ರಾಸಾಯನಿಕ ಕೃಷಿಯಿಂದ ಹೊರಬಂದು ಸಾವಯವ ಕೃಷಿಯತ್ತ ಹೆಚ್ಚು ಒಲವು ತೋರಿದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿ ಹಾಗೂ ಉತ್ತಮ ಆರೋಗ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಎಸ್. ಪಾಟೀಲ, ರಾಜ್ಯ ಪ್ರತಿನಿಧಿ ಅರವಿಂದ ಎಂ. ಕಟಗಿ, ಜಿಲ್ಲಾ ಉಪಾಧ್ಯಕ್ಷ ಸಂತೋಷ ಸೋಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಬಿ. ಬಾಡಿನ, ಜಿಲ್ಲಾ ಖಜಾಂಚಿ ಬಸಪ್ಪ ನಿಂ. ಗುಡೆಣ್ಣವರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ವಿವಿಧ ತಾಲೂಕುಗಳ ಕೃಷಿಕ ಸಮಾಜದ ಪದಾಧಿಕಾರಿಗಳು, ಪ್ರಗತಿಪರ ರೈತರು, ಕೃಷಿ ಪರಿಕರ ಮಾರಾಟಗಾರರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಆತ್ಮ ಯೋಜನೆಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *