ಕುಂದಗೋಳ ಬಳಿ ಭೀಕರ ರಸ್ತೆ ಅಪಘಾತ: ಲಾರಿ-ಬಸ್ ಮುಖಾಮುಖಿ ಡಿಕ್ಕಿ, ಶಿರೂರ ಗ್ರಾಮದ ಐಟಿಐ ವಿದ್ಯಾರ್ಥಿಯ ರುಂಡ ಕತ್ತರಿಸಿ ಸ್ಥಳದಲ್ಲೇ ದಾರುಣ ಸಾವು!

Spread the love

ಕುಂದಗೋಳ: ಪಟ್ಟಣದ ಹುಬ್ಬಳ್ಳಿ-ಲಕ್ಷ್ಮೇಶ್ವರ ಮುಖ್ಯ ರಸ್ತೆಯ ಕೊಪ್ಪದ ಕೆರೆಯ ಬಳಿ ಬುಧವಾರ ಸಂಜೆ ಲಾರಿ ಹಾಗೂ ಸಾರಿಗೆ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐಟಿಐ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದಾನೆ. ಶಿರೂರ ಗ್ರಾಮದ ನಿವಾಸಿಯಾದ, ಐಟಿಐ ಓದುತ್ತಿದ್ದ ಫಕ್ಕೀರೇಶ ಚನ್ನಯ್ಯ ಮುತ್ತಳ್ಳಿಮಠ (ಅಂದಾಜು 17 ವರ್ಷ) ಎಂಬಾತನೇ ಈ ದುರ್ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

​ಸಂಜೆ ಸುಮಾರು 5 ಗಂಟೆಯ ವೇಳೆಗೆ ಲಕ್ಷ್ಮೇಶ್ವರ ಡಿಪೋಗೆ ಸೇರಿದ ಕೆ.ಎ. 26 ಎಫ್-1039 ನಂಬರಿನ ಸಾರಿಗೆ ಬಸ್ ಹಾಗೂ ಎಂ-ಸ್ಯಾಂಡ್ ತುಂಬಿಕೊಂಡು ಹೋಗುತ್ತಿದ್ದ ಕೆ.ಎ. 04 ಎ.ಡಿ. 7218 ನಂಬರಿನ ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಕಿಟಕಿಯಿಂದ ಹೊರಗಿದ್ದ ವಿದ್ಯಾರ್ಥಿ ಫಕ್ಕೀರೇಶನ ತಲೆ (ರುಂಡ) ಕತ್ತರಿಸಿ ರಸ್ತೆಗೆ ಬಿದ್ದಿದ್ದು, ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾನೆ. ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಈ ದಾರುಣ ದೃಶ್ಯವನ್ನು ಕಂಡು ಕಂಬನಿ ಮಿಡಿದಿದ್ದಾರೆ.

​ವಿಷಯ ತಿಳಿಯುತ್ತಿದ್ದಂತೆ ಕುಂದಗೋಳ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ಘಟನೆಗೆ ನಿಖರ ಕಾರಣವೇನು ಎಂಬ ಕುರಿತು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *