ದುರ್ಬಲರ ರಕ್ಷಣೆಗೆ ಪೊಲೀಸರು ಆದ್ಯತೆ ನೀಡಲಿ: ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು: ಸಮಾಜದಲ್ಲಿ ಜಾತಿ ತಾರತಮ್ಯವನ್ನು ಅನುಭವಿಸುತ್ತಿರುವ ದುರ್ಬಲ ವರ್ಗದವರ ರಕ್ಷಣೆಗಾಗಿ ಪೊಲೀಸರು ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ರಾಜ್ಯ ಗೃಹ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ರಾಜಭವನದಲ್ಲಿ ನಡೆದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ.
ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದ್ದು, ಅವರ ಸಾಮಾಜಿಕ ಬದ್ಧತೆ ಸಮಾಜದಲ್ಲಿ ಶಾಂತಿ ನೆಲೆಸಲು ಸಹಕಾರಿ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಡಾ.ಬಿ.ಆರ್. ಅಂಬೇಡ್ಕರ್ ಅವರ ನುಡಿಗಳನ್ನು ಸ್ಮರಿಸುತ್ತಾ, ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ದುರ್ಬಲರ ಜೀವನ ದುಸ್ತರವಾಗುತ್ತದೆ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ದುರ್ಬಲರ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಬೇಕು ಎಂದರು.

ಡಿಸಿಆರ್‌ಇ ಠಾಣೆಗಳ ಕಾರ್ಯವೈಖರಿ ಅತೃಪ್ತಿದಾಯಕ
ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಡಿಸಿಆರ್‌ಇ (DCRE – District Civil Rights Enforcement) ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದ್ದರೂ, ಇತ್ತೀಚೆಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಅವುಗಳ ಕಾರ್ಯ ಮತ್ತು ಪ್ರಗತಿ ತೃಪ್ತಿದಾಯಕವಾಗಿಲ್ಲ ಎಂದು ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಹಳ ಕಡಿಮೆಯಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಹಾಗೂ ಸರ್ಕಾರದ ಉದ್ದೇಶ ಈಡೇರಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಪ್ರಶಸ್ತಿ ವಿಜೇತರ ಸಾಧನೆ ಶ್ಲಾಘನೀಯ
ಪೊಲೀಸರ ಸಂಖ್ಯೆಗಿಂತ ಅವರು ತಡೆಗಟ್ಟಿರುವ ಅಪರಾಧಗಳ ಸಂಖ್ಯೆ ಮುಖ್ಯ ಎಂದು ಹೇಳಿದ ಸಿಎಂ, ಇಂದು ಪದಕ ಪಡೆದ ಅಧಿಕಾರಿಗಳ ಸಾಧನೆ ಶ್ಲಾಘನೀಯವಾಗಿದ್ದು, ಅದು ಇತರರಿಗೆ ಮಾದರಿಯಾಗಬೇಕು ಎಂದರು. ಪ್ರಾಮಾಣಿಕತೆ, ಪರಿಶ್ರಮ ಮತ್ತು ಸೇವಾ ಮನೋಭಾವದಿಂದ ಮಾತ್ರ ಇಂತಹ ಸಾಧನೆ ಸಾಧ್ಯ ಎಂದು ಅವರು ನುಡಿದರು.

ಪೊಲೀಸರು ಆತ್ಮಾವಲೋಕನ ಮಾಡಿಕೊಂಡು, ಸಾಮಾಜಿಕ ಕಳಕಳಿಯಿಂದ ಉತ್ತಮ ಸೇವೆ ಸಲ್ಲಿಸುವಂತೆ ಅವರು ಸಲಹೆ ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಜನರ ಆಸ್ತಿಪಾಸ್ತಿ ರಕ್ಷಿಸುವುದು ಹಾಗೂ ಸಮಾಜದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವುದು ಪೊಲೀಸರ ಪ್ರಮುಖ ಜವಾಬ್ದಾರಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Leave a Reply

Your email address will not be published. Required fields are marked *