
ಮಳವಳ್ಳಿ: ಪಟ್ಟಣದ ನ್ಯೂ ರೇಬೋ ಕಿಡ್ಸ್ ಸಂಸ್ಥೆಯ ವತಿಯಿಂದ ಪುಟಾಣಿ ಮಕ್ಕಳೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ವಿದ್ಯಾ ಅವರು ಗಿಡಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಿದ್ಯಾ ಅವರು, ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗಿ ಪರಿಸರ ಸಂಪೂರ್ಣವಾಗಿ ಹಾಳಾಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗಿದೆ. ಕೇವಲ ಭಾಷಣಕ್ಕೆ ಸೀಮಿತವಾಗದೆ, ಎಲ್ಲಾ ಖಾಲಿ ಜಾಗಗಳಲ್ಲೂ ಗಿಡಗಳನ್ನು ನೆಟ್ಟು, ಅವುಗಳಿಗೆ ನಿಯಮಿತವಾಗಿ ನೀರು ಹಾಕಿ ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಹೊಣೆಯಾಗಿದೆ ಎಂದು ಕರೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕರಾದ ಉದಯಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಲಿನ್ಯ ಹೆಚ್ಚಾಗಿ ಪರಿಸರ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಗಟ್ಟಲು ಮತ್ತು ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದರು.
ದಿನಾಚರಣೆಯ ಅಂಗವಾಗಿ ಸಂಸ್ಥೆಯ ಪುಟಾಣಿ ಮಕ್ಕಳು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ “ಕಾಡು ಬೆಳೆಸಿ, ನಾಡು ಉಳಿಸಿ” ಎಂಬ ಪರಿಸರ ಜಾಗೃತಿಯ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಉದಯಕುಮಾರ್, ಶಿಕ್ಷಕಿಯರಾದ ಶುಭ, ನೇತ್ರಾವತಿ, ಶೋಭಾರಾಣಿ, ಸುಮ, ಕವಿತಾ, ಅಮೃತಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

