‘ಮೈ ಪಬ್ಲಿಕ್ ಸಮಾಚಾರ’ ವಿಶೇಷ ವರದಿ ಪರಿಣಾಮ: ಕಲ್ಮೇಶ್ವರ ನಗರಕ್ಕೆ KUIDFC ಅಧಿಕಾರಿಗಳ ಭೇಟಿ, ನೀರಿನ ಗೊಂದಲಕ್ಕೆ ತೆರೆ

Spread the love

ಹುಬ್ಬಳ್ಳಿ:ಹಳೇ ಹುಬ್ಬಳ್ಳಿಯ ಕಲ್ಮೇಶ್ವರ ನಗರದಲ್ಲಿ ಮಣ್ಣು ಮಿಶ್ರಿತ ನೀರು ಸರಬರಾಜಾಗುತ್ತಿರುವ ಕುರಿತು ‘ಮೈ ಪಬ್ಲಿಕ್ ಸಮಾಚಾರ’ ಸುದ್ದಿ ಸಂಸ್ಥೆಯು ರವಿವಾರ ವಿಶೇಷ ವರದಿಯನ್ನು ಪ್ರಸಾರ ಮಾಡಿತ್ತು. ಸಾರ್ವಜನಿಕರ ಸಮಸ್ಯೆಯನ್ನು ಬಿಂಬಿಸಿದ ಈ ಸುದ್ದಿಗೆ ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಿದೆ.

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ KUIDFC ಇಲಾಖೆಯ ಅಧಿಕ್ಷಕ ಅಭಿಯಂತರರಾದ ಸವಿತಾ ಕಟಿಗೆಣ್ಣವರ ಹಾಗೂ ಅವರ ತಾಂತ್ರಿಕ ತಂಡವು ಸೋಮವಾರ ಕಲ್ಮೇಶ್ವರ ನಗರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸ್ಥಳದಲ್ಲೇ ನಿಂತು ಸ್ವಚ್ಛವಾದ ನೀರು ಸರಬರಾಜಾಗುವಂತೆ ಕ್ರಮ ಕೈಗೊಂಡ ಅಧಿಕಾರಿಗಳು, ಸಾರ್ವಜನಿಕರ ಆತಂಕವನ್ನು ದೂರ ಮಾಡಲು ತಾಂತ್ರಿಕ ಕಾರಣಗಳ ಕುರಿತು ಸ್ಪಷ್ಟನೆ ನೀಡಿದರು.

ಕಲ್ಮೇಶ್ವರ ನಗರದ ಭಾಗದಲ್ಲಿ ಸರಬರಾಜಾಗುತ್ತಿರುವ ನೀರು ಕಲುಷಿತಗೊಂಡಿಲ್ಲ (Contaminated). ಅದು ಕೇವಲ ಪೈಪ್‌ಲೈನ್ ರಿಪೇರಿಯಿಂದಾಗಿ ಬಂದಿರುವ ಮಣ್ಣು ಮಿಶ್ರಿತ ನೀರಾಗಿದೆ (Mud Water) ಎಂದು ಅಧಿಕಾರಿ ಸವಿತಾ ಕಟಿಗೆಣ್ಣವರ ತಿಳಿಸಿದ್ದಾರೆ.

ಇತ್ತೀಚೆಗೆ ಅಮೀನ್‌ಬಾವಿಯಿಂದ ಬರುವ ಮುಖ್ಯ ಲೈನ್ ಹಾಗೂ ದುಮ್ಮಾಡಿಯಿಂದ ಕ ಹೋನ್ನಾಪುರಕ್ಕೆ ಸಂಪರ್ಕಿಸುವ ನೀರಿನ ಪೈಪ್‌ಲೈನ್‌ಗಳಲ್ಲಿ ಎರಡು ಕಡೆ ಪ್ರಮುಖ ಸೋರಿಕೆಗಳು (Major Leakages) ಕಂಡುಬಂದಿದ್ದವು. ಈ ಸಮಸ್ಯೆಯನ್ನು ಸರಿಪಡಿಸಲು ಒಂದೇ ದಿನ ಶಟ್‌ಡೌನ್ ತೆಗೆದುಕೊಂಡು ಕಟ್ಟುನಿಟ್ಟಿನ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿತ್ತು.

ಪೈಪ್‌ಲೈನ್ ರಿಪೇರಿ ಮುಗಿದ ತಕ್ಷಣ ಆರಂಭದಲ್ಲಿ ನೀರು ಸರಬರಾಜು ಮಾಡುವಾಗ, ಪೈಪ್‌ಗಳಲ್ಲಿ ಶೇಖರಣೆಯಾಗುವ ಮಣ್ಣು ಮಿಶ್ರಿತ ನೀರು ಬರುವುದು ಸಹಜ ತಾಂತ್ರಿಕ ಪ್ರಕ್ರಿಯೆಯಾಗಿದೆ ಎಂದು ಅವರು ವಿವರಿಸಿದರು.

ಆರಂಭದಲ್ಲಿ ಮಣ್ಣಿನ ನೀರು ಬರದಂತೆ ತಡೆಯಲು ಇಲಾಖೆಯ ವತಿಯಿಂದ ಫ್ಲಶ್ ಔಟ್ (ಸ್ಕವರ್) ಮಾಡಲಾಗಿತ್ತಾದರೂ, ಪೈಪ್‌ಲೈನ್ ಉದ್ದ ಹೆಚ್ಚಿರುವುದರಿಂದ ನಿವಾಸಿಗಳ ನಲ್ಲಿಗಳಿಗೆ ತಲುಪುವಾಗ ಸ್ವಲ್ಪ ಪ್ರಮಾಣದ ಮಣ್ಣಿನ ನೀರು ಬಂದಿದೆ. ಇದನ್ನು ಕಲುಷಿತ ನೀರು ಎಂದು ಭಾವಿಸಿ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಈ ಕುರಿತು ಈಗಾಗಲೇ ಪ್ರಕಟಣೆ ನೀಡಿ, ಕಡಿಮೆ ಒತ್ತಡದಲ್ಲಿ ನೀರು ಬರುವ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

ಸದ್ಯಕ್ಕೆ ಕಲ್ಮೇಶ್ವರ ನಗರಕ್ಕೆ ನೀರು ಸರಬರಾಜು ಸುಗಮಗೊಂಡಿದ್ದು, ಸ್ವಚ್ಛವಾದ ನೀರು ಬರುತ್ತಿದೆ. ಒಂದು ವೇಳೆ ಆರಂಭದಲ್ಲಿ ಮಣ್ಣಿನ ನೀರು ಕಂಡುಬಂದಲ್ಲಿ, ನಿವಾಸಿಗಳು ಸ್ವಲ್ಪ ಸಮಯದವರೆಗೆ ಆ ನೀರನ್ನು ಹರಿದು ಹೋಗಲು ಬಿಡಬೇಕು. ಆ ನಂತರ ಸ್ವಚ್ಛ ನೀರು ಬರಲಾರಂಭಿಸುತ್ತದೆ.

ಈ ನೀರು ಯಾವುದೇ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಲ್ಲದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ನಿವಾಸಿಗಳು ನೀರನ್ನು ಚೆನ್ನಾಗಿ ಕಾಯಿಸಿ, ಶೋಧಿಸಿಕೊಂಡು ಅಡುಗೆಗೆ ಹಾಗೂ ಕುಡಿಯಲು ಬಳಸಬಹುದು ಎಂದು ಸವಿತಾ ಕಟ್ಗೆಣ್ಣವರ್ ಅವರು ನಿವಾಸಿಗಳಿಗೆ ಸಲಹೆ ನೀಡಿದ್ದಾರೆ.

‘ಮೈ ಪಬ್ಲಿಕ್ ಸಮಾಚಾರ’ ವರದಿಯ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಮಸ್ಯೆ ಬಗೆಹರಿಸಿರುವುದಕ್ಕೆ ಕಲ್ಮೇಶ್ವರ ನಗರದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *