
ಮಂಡ್ಯ, ಮೇ.23: ನಗರದ ಬಂದೀಗೌಡ ಬಡಾವಣೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯಾರ್ಥಿನಿಯರ ವಾಸದ ಪರಿಸ್ಥಿತಿ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಕಂಡು ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪರಿಶೀಲನೆ ವೇಳೆ ಒಂದೇ ಕೊಠಡಿಯಲ್ಲಿ 13 ವಿದ್ಯಾರ್ಥಿನಿಯರು ವಾಸಿಸುತ್ತಿರುವುದು ಬೆಳಕಿಗೆ ಬಂದಿದ್ದು, ಇದರಿಂದ ಆಕ್ರೋಶಗೊಂಡ ಉಪ ಲೋಕಾಯುಕ್ತರು, “ಇವರು ಮಕ್ಕಳು ಎಂದು ತಿಳ್ಕೊಂಡಿದ್ದೀರಾ ಅಥವಾ ಪ್ರಾಣಿಗಳಾ? ನಿಮಗೆ ಮನುಷ್ಯತ್ವ ಇದೆಯಾ?” ಎಂದು ಪ್ರಶ್ನಿಸಿದರು.
ಬಡ ಕುಟುಂಬಗಳ ಮಕ್ಕಳು ಓದಿಗಾಗಿ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದು, ಅವರನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಅವರು ಹೇಳಿದರು. “ಅವರಿಗೆ ಅನುಕೂಲಕರ ವ್ಯವಸ್ಥೆ ಇದ್ದಿದ್ದರೆ ಇಲ್ಲಿ ಬರಬೇಕಾಗುತ್ತಿತ್ತೇ? ಓದಲು ಬಂದ ಮಕ್ಕಳನ್ನು ಹೀಗೆ ನೋಡಿಕೊಳ್ಳುವುದು ಸರಿಯೇ?” ಎಂದು ವಸತಿ ನಿಲಯದ ಅಧಿಕಾರಿಗಳನ್ನು ಗದರಿಸಿದರು.
ವಿದ್ಯಾರ್ಥಿನಿಯರಿಗೆ ಅಗತ್ಯ ಮೂಲಸೌಕರ್ಯಗಳೇ ಇಲ್ಲದಿರುವುದನ್ನು ಕಂಡು ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ, ವೈದ್ಯರ ಭೇಟಿ ಇಲ್ಲ, ಸರಿಯಾದ ಆಹಾರ ವ್ಯವಸ್ಥೆ ಇಲ್ಲ, ಊಟಕ್ಕೆ ಬೇಕಾದ ಪಾತ್ರೆಗಳ ಕೊರತೆ ಇದೆ ಎಂದು ವಿದ್ಯಾರ್ಥಿನಿಯರು ದೂರಿದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಬಿ. ವೀರಪ್ಪ, “ಅಂಬೇಡ್ಕರ್ ಸಂವಿಧಾನ ಕೊಟ್ಟು ಹೋಗಿದ್ದಾರೆ. ಆದರೆ ನೀವು ಮಕ್ಕಳಿಗೆ ಚಿತ್ರಹಿಂಸೆ ಕೊಡುತ್ತಿದ್ದೀರಿ. ಸಮಾನತೆ ಮತ್ತು ಗೌರವಯುತ ಬದುಕಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೀರಿ” ಎಂದು ಹೇಳಿದರು.
ಪಾತ್ರೆಗಳ ಖರೀದಿ ವಿಚಾರದಲ್ಲೂ ಅನುಮಾನ ವ್ಯಕ್ತಪಡಿಸಿದ ಅವರು, “ಪಾತ್ರೆ ತೆಗೆದುಕೊಳ್ಳುವುದಕ್ಕೂ ನಿಮಗೆ ಯೋಗ್ಯತೆ ಇಲ್ಲವೇ? ಅದಕ್ಕೂ ಲೆಟರ್ ಬರೆಯಬೇಕಾ?” ಎಂದು ಪ್ರಶ್ನಿಸಿದರು. ಈ ವೇಳೆ ಅಧಿಕಾರಿಗಳು ಪಾತ್ರೆಗಳ ಖರೀದಿಗೆ ಸುಮಾರು 13 ರಿಂದ 14 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳಿದಾಗ, “ಈ ಪಾತ್ರೆಗಳಿಗೆ 73 ಲಕ್ಷನಾ?” ಎಂದು ಅಚ್ಚರಿ ವ್ಯಕ್ತಪಡಿಸಿದರು.
ಉಪ ಲೋಕಾಯುಕ್ತರ ದಿಢೀರ್ ಭೇಟಿ ಮತ್ತು ಅಧಿಕಾರಿಗಳ ವಿರುದ್ಧದ ಕಠಿಣ ತರಾಟೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

