ಧಾರವಾಡ-ಹಾವೇರಿ ಪೊಲೀಸರ ಜಂಟಿ ಭರ್ಜರಿ ಕಾರ್ಯಾಚರಣೆ: ಸಿನಿಮೀಯ ಶೈಲಿಯಲ್ಲಿ ಅಂತರರಾಜ್ಯ ಕಳ್ಳರ ಗ್ಯಾಂಗ್ ಪತ್ತೆ, 1.15 ಕೋಟಿ ಮೌಲ್ಯದ ಆಭರಣ ಜಫ್ತು

Spread the love

ಹುಬ್ಬಳ್ಳಿ: ಧಾರವಾಡ ಮತ್ತು ಹಾವೇರಿ ಜಿಲ್ಲಾ ಪೊಲೀಸರು ಜಂಟಿಯಾಗಿ ನಡೆಸಿದ ಸಿನಿಮೀಯ ಮಾದರಿಯ ಮಹತ್ವದ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಕಳ್ಳರ ಗ್ಯಾಂಗ್ ಒಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷೇಶ್ವರ ತಾಲ್ಲೂಕಿನ ಬಾಳೇಹೊಸೂರಿನ ಶಿವರಾಜ ಹನುಮಂತಪ್ಪ ಮೋಡಿಕೇರ ಹಾಗೂ ಸಿಂಧನೂರು ತಾಲ್ಲೂಕಿನ ಅಂಬಾಪುರದ ಅಶೋಕ ಅಲಿಯಾಸ್ ರಮೇಶ್ ಶಿವಪ್ಪ ಕೊಂಜೆಕುರವರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಜಾಲದಲ್ಲಿದ್ದ ಇನ್ನುಳಿದ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಹಾಗೂ ಕೇವಲ ಎರಡು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬಂಗಾರದ ಅಂಗಡಿಯ ಕಳ್ಳತನ ಪ್ರಕರಣಗಳನ್ನು ಭೇದಿಸಲು ಉಭಯ ಜಿಲ್ಲೆಗಳ ಪೊಲೀಸರು ವಿಶೇಷ ಜಂಟಿ ತಂಡವನ್ನು ರಚಿಸಿದ್ದರು. ಕಾರ್ಯಾಚರಣೆಯ ವೇಳೆ ಬಂಧಿತರಿಂದ 310 ಗ್ರಾಂ ಬಂಗಾರದ ಆಭರಣಗಳು, 26 ಕೆ.ಜಿ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮತ್ತು ತೆಲಂಗಾಣದಲ್ಲಿ ಕಳವು ಮಾಡಲಾಗಿದ್ದ ಒಂದು ಬುಲೆರೋ ವಾಹನವನ್ನು ಜಫ್ತು ಮಾಡಲಾಗಿದೆ.

ಧಾರವಾಡ ಮತ್ತು ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ತನಿಖಾ ತಂಡದಲ್ಲಿ ಸೈಬರ್ ಕ್ರೈಂ ಡಿವೈಎಸ್‌ಪಿ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗದ ಡಿವೈಎಸ್‌ಪಿ ವಿನೋದ ಮುತ್ತೇದಾರ, ಹುಬ್ಬಳ್ಳಿ ಗ್ರಾಮೀಣ ಇನ್ಸ್‌ಪೆಕ್ಟರ್ ಮುರುಗೇಶ ಚನ್ನಣ್ಣವರ, ನವಲಗುಂದ ಸಿಪಿಐ ರವಿ ಕಪ್ಪತ್ತನವರ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪಿಎಸ್‌ಐ ಇಮ್ರಾನ್ ಪಠಾಣ್ ನೇತೃತ್ವ ವಹಿಸಿದ್ದರು. ಇವರಿಗೆ ಹಾವೇರಿ ಜಿಲ್ಲೆಯ ಪಿಎಸ್‌ಐಗಳಾದ ಸಂಪತ್, ಶರಣಪ್ಪ, ಮಂಜುನಾಥ ಮತ್ತು ಯಲ್ಲಪ್ಪ ಸಾಥ್ ನೀಡಿದ್ದರು.

ಇನ್ನುಳಿದಂತೆ ಹುಬ್ಬಳ್ಳಿ ಗ್ರಾಮೀಣ ಅಪರಾಧ ದಳದ ಎನ್. ಎಮ್. ಹೊನ್ನಪ್ಪನವರ (ಎಎಸ್‌ಐ), ಸಿಬ್ಬಂದಿಯಾದ ಎಚ್. ಬಿ. ಬಹೋಳಿ, ಅಬ್ದುಲ್ ಕಾತರ, ಚನ್ನಪ್ಪ ಬಳ್ಳೋಳ್ಳಿ, ಮಾಂತೇಶ ಮದ್ದೀನ ಹಾಗೂ ನವಲಗುಂದ ಠಾಣೆಯ ಸಿಬ್ಬಂದಿಯಾದ ಮುತ್ತಪ್ಪ ಭಜಂತ್ರಿ, ಸದಾಶಿವ ಮುಖ್ಯರ, ಶ್ರೀಧರ ಕಡಕೋಳ, ಎಸ್. ಬಿ. ಕಳ್ಳಮನಿ, ಗೊಳಪ್ಪ ಜಗಲಿ ಮತ್ತು ತಾಂತ್ರಿಕ ಸಿಬ್ಬಂದಿ ವಿಠಲ ಡಿಂಗನವರ ಈ ಜಂಟಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಂತ ಚುರುಕಾಗಿ ಕಾರ್ಯನಿರ್ವಹಿಸಿ, ಜಂಟಿ ಕಳ್ಳತನ ಪ್ರಕರಣಗಳನ್ನು ಸಿನಿಮೀಯ ಶೈಲಿಯಲ್ಲಿ ಭೇದಿಸಿದ ಇಡೀ ತಂಡದ ಕಾರ್ಯವನ್ನು ಉನ್ನತ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದು, ಇಡೀ ತಂಡಕ್ಕೆ ವಿಶೇಷ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *