ಕುಂದಗೋಳದಲ್ಲಿ ಲೋಕಾಯುಕ್ತ ದಿಢೀರ್ ಭೇಟಿ: ದಾಖಲೆಗಳ ಪರಿಶೀಲನೆ, ಸಿಬ್ಬಂದಿ ತಲ್ಲಣ

ಕುಂದಗೋಳ: ಇಲ್ಲಿನ ತಹಶೀಲ್ದಾರ್ ಕಚೇರಿಯ ವಿವಿಧ ಇಲಾಖೆಗಳ ಮೇಲೆ ಧಾರವಾಡದ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ಈ ಹಠಾತ್ ಭೇಟಿಯಿಂದ ಕಚೇರಿಯ ಸಿಬ್ಬಂದಿ ತಲ್ಲಣಗೊಂಡಿದ್ದು, ದಾಳಿಯ ವೇಳೆ ಅಧಿಕಾರಿಗಳು ಕಚೇರಿಯ ಪ್ರಮುಖ ದಾಖಲಾತಿಗಳನ್ನು ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳ ಕೆಲಸದ ವೈಖರಿಯನ್ನು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಸಾರ್ವಜನಿಕರ ದೂರುಗಳು ಹಾಗೂ ಕಚೇರಿಯಲ್ಲಿ ನಡೆಯುತ್ತಿದ್ದ ಆಡಳಿತಾತ್ಮಕ ವ್ಯವಹಾರಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನು ನಂಬಿಕಸ್ಥ ಮೂಲಗಳ ಪ್ರಕಾರ, ಲೋಕಾಯುಕ್ತರ ಈ ಕಾರ್ಯಾಚರಣೆಯ ವೇಳೆ ಕಚೇರಿಯ ಓರ್ವ ಪ್ರಮುಖ ಅಧಿಕಾರಿ ಸಿಕ್ಕಿಬಿದ್ದು, ಟ್ರ್ಯಾಪ್ ಆಗಿರುವ ಬಲವಾದ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸದ್ಯ ಲೋಕಾಯುಕ್ತ ಪೊಲೀಸರು ಕಚೇರಿಯಲ್ಲೇ ಬೀಡುಬಿಟ್ಟಿದ್ದು, ದಾಖಲೆಗಳ ತಪಾಸಣೆ ಹಾಗೂ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಈ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

