ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯ: ಡಾ. ಸುರೇಶ್ ಕಮ್ಮಾರ

Spread the love

ಧಾರವಾಡ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಅವರಲ್ಲಿರುವ ಪ್ರತಿಭೆ ಹೊರಹಾಕಲು ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಪಾಲಕರು ಮಕ್ಕಳಿಗೆ ನೃತ್ಯ, ಸಂಗೀತ, ಕರಾಟೆಯಂತಹ ಕಲೆಗಳಲ್ಲಿ ಭಾಗವಹಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಭಾರತದ ಮಾನವ ಹಕ್ಕುಗಳ ಸಮಿತಿ ಸದಸ್ಯ ಹಾಗೂ ಜಿಲ್ಲಾ ಸಂಪನ್ಮೂಲ ಅಧಿಕಾರಿ ಡಾ. ಸುರೇಶ್ ಕಮ್ಮಾರ ಹೇಳಿದರು.

​ನಗರದ ಯುವ ಡಾನ್ಸ್ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ‘ಯುವ ಉತ್ಸವ-೨೦೨೬’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ಡಾನ್ಸ್ ಅಕಾಡೆಮಿಯು ಕಳೆದ ಹದಿನೆಂಟು ವರ್ಷಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಅಕಾಡೆಮಿಯ ಮುಖ್ಯಸ್ಥ ರಮೇಶ್ ಪಾಟೀಲ್ ಅವರಿಗೆ ಕೇಂದ್ರ ಸರ್ಕಾರದಿಂದ ಹೊಸ ಯೋಜನೆಗಳನ್ನು ಕೊಡಿಸಲು ತಾವು ಸದಾ ಸಿದ್ಧರಿರುವುದಾಗಿ ಅವರು ಭರವಸೆ ನೀಡಿದರು.

​ಮತ್ತೊಬ್ಬ ಅತಿಥಿ ದೀಪಕ್ ಚಿಂಚೋರೆ ಮಾತನಾಡಿ, ಯುವ ಡಾನ್ಸ್ ಅಕಾಡೆಮಿ ಇಡೀ ಕರ್ನಾಟಕದಲ್ಲಿ ಹೆಸರುವಾಸಿಯಾಗಿದ್ದು, ಇಲ್ಲಿ ಕಲಿತ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆದಿದ್ದಾರೆ. ದೈಹಿಕ ಮತ್ತು ಮಾನಸಿಕ ಸದೃಢತೆಗೆ ನೃತ್ಯ ಹಾಗೂ ವ್ಯಾಯಾಮ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ಹಂಪಿ ಉತ್ಸವ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಈ ಅಕಾಡೆಮಿಯ ಮಕ್ಕಳಿಗೆ ಪ್ರಾತಿನಿಧ್ಯ ಸಿಗುವಂತೆ ಸಹಕರಿಸಲಾಗುವುದು ಎಂದರು.

​ಶಿಕ್ಷಣ ತಜ್ಞ ಎಮ್.ಎಮ್. ಚಿಕ್ಕಮಠ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಫೋನ್ ಗೀಳಿಗೆ ಬಲಿಯಾಗುತ್ತಿದ್ದು, ಇದರಿಂದ ಸಣ್ಣ ವಯಸ್ಸಿನಲ್ಲಿಯೇ ಬಿಪಿ, ಶುಗರ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಬೇಸಿಗೆ ಶಿಬಿರಗಳ ಮೂಲಕ ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವ ಅಕಾಡೆಮಿಯ ಪ್ರಯತ್ನ ಮೆಚ್ಚುವಂತಹದ್ದು ಎಂದು ತಿಳಿಸಿದರು.

​ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ ಮಾತನಾಡಿ, ಯುವ ಡಾನ್ಸ್ ಅಕಾಡೆಮಿಯ ಶಿಬಿರಗಳಲ್ಲಿ ಮಕ್ಕಳು ಶಿಸ್ತು ಅಳವಡಿಸಿಕೊಳ್ಳುತ್ತಿರುವುದು ಸಂತಸದ ವಿಷಯ. ರಮೇಶ್ ಪಾಟೀಲ್ ಅವರ ಶಿಸ್ತುಬದ್ಧ ಕಾರ್ಯವೈಖರಿಗೆ ಸದಾ ಇಲಾಖೆಯ ಬೆಂಬಲ ಇರಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಉಮೇಶ್ ಹಳ್ಳಿಕೇರಿ ಅವರು ಮಾತನಾಡಿ, ನೃತ್ಯದೊಂದಿಗೆ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧನಸಹಾಯ ಮಾಡುವುದು ಹಾಗೂ ಅತಿಥಿಗಳಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಕಾಳಜಿ ಮೆರೆಯುತ್ತಿರುವುದು ಅಕಾಡೆಮಿಯ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ. ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

​ಸಮಾರಂಭದಲ್ಲಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಇದೇ ಸಂದರ್ಭದಲ್ಲಿ ಧನ ಸಂಗ್ರಹಿಸಲಾಯಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಮೇಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದೃಶ್ಯ ಕುರುಬಗಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ವಂದಿಸಿದರು. ಅಕಾಡೆಮಿಯ ರಮೇಶ್ ಪಾಟೀಲ್ ಹಾಗೂ ಪಾಲಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *