

ಧಾರವಾಡ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಬೆಳೆ ವಿಮೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ವಿರುದ್ಧ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೇ ಹಾನಿಗೊಂಡ ಹೆಸರು ಕಾಳು ಹಾಗೂ ಉದ್ದು ಬೆಳೆಗಳನ್ನು ಚೆಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ವಿಮೆಯಲ್ಲಿ ಅಧಿಕಾರಿಗಳ ಮ್ಯಾಚ್ ಫಿಕ್ಸಿಂಗ್’:
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, “ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಕೆಲವು ಪ್ರದೇಶಗಳಲ್ಲಿ ಮಾತ್ರ ಬೆಳೆ ವಿಮೆ ಬಿಡುಗಡೆ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
“ಬೆಳೆ ವಿಮೆಯಲ್ಲಿ ಲಕ್ಷಾಂತರ ಕೋಟಿ ರೂಪಾಯಿ ರೈತರಿಗೆ ನಷ್ಟವಾಗಿದೆ. ಅಧಿಕಾರಿಗಳೇ ಬೆಳೆ ವಿಮೆಯಲ್ಲಿ ಪಾಲುದಾರರಾಗಿರುವುದು ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಇದೇ ಮೊದಲು. ಏಜೆಂಟರು ಮತ್ತು ಕೆಲವು ಪುಡಿ ರಾಜಕಾರಣಿಗಳೊಂದಿಗೆ ಶಾಮೀಲಾಗಿ, ಎಲ್ಲಿ ರೈತರು ವಿಮೆ ತುಂಬಿಲ್ಲವೋ ಅಲ್ಲಿಯೂ ಅಧಿಕಾರಿಗಳೇ ನಕಲಿ ಮಾಹಿತಿ ನೀಡಿ ವಿಮೆ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇದು ರೈತನ ಹೊಟ್ಟೆ ಮೇಲೆ ಹೊಡೆಯುವ ನೀಚ ಕೃತ್ಯ” ಎಂದು ಕಿಡಿಕಾರಿದರು. ಈ ಭ್ರಷ್ಟಾಚಾರದ ಕುರಿತು ಸಂಪೂರ್ಣ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.
‘ಕೇವಲ ಶಿರಗುಪ್ಪಿ ಹಾಗೂ ಕುಂದಗೋಳಕ್ಕೆ ಮಾತ್ರ ವಿಮೆ’:
“ಧಾರವಾಡ ಜಿಲ್ಲೆಯಾದ್ಯಂತ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಶಿರಗುಪ್ಪಿ ಹೋಬಳಿ ಮತ್ತು ಕುಂದಗೋಳಕ್ಕೆ ಮಾತ್ರ ಬೆಳೆ ವಿಮೆ ಬಿಡುಗಡೆಯಾಗಿದೆ. ಇದು ಹೇಗೆ ಸಾಧ್ಯ? ಇದು ಭ್ರಷ್ಟಾಚಾರವಲ್ಲದೆ ಮತ್ತೇನು?. ಇದರ ವಿರುದ್ಧ ತಾರ್ಕಿಕ ಅಂತ್ಯ ಕಾಣುವವರೆಗೂ ನಮ್ಮ ಹೋರಾಟ ನಿಲ್ಲದು” ಎಂದು ಶಂಕರ ಪಾಟೀಲ್ ಮುನೇನಕೊಪ್ಪ ಎಚ್ಚರಿಕೆ ನೀಡಿದರು.
‘ಗ್ಯಾರಂಟಿ ಹೆಸರಲ್ಲಿ ರೈತರ ನಿರ್ಲಕ್ಷ್ಯ’:
ಪ್ರಸ್ತುತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಮಳೆ ಹಾನಿ ವೀಕ್ಷಣೆಗೆ ಬಂದ ಸಚಿವರು ಹಾಗೂ ಶಾಸಕರ ಭೇಟಿ ಕೇವಲ ಪ್ರಚಾರಕ್ಕೆ ಸೀಮಿತವಾಗಿದೆ. ಯಾವ ರೈತನಿಗೆ ಪರಿಹಾರ ತಲುಪಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಲಿ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆಂದು ಹೇಳಿಕೊಂಡು ರೈತರನ್ನು ನಿರ್ಲಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ಖಂಡಿಸುತ್ತೇನೆ” ಎಂದರು.
ಪ್ರತಿಭಟನೆಯ ನಂತರ, ಮಾಜಿ ಸಚಿವರು ಮತ್ತು ರೈತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಬೆಳೆ ಹಾನಿ, ಬೆಳೆ ವಿಮೆ ಹಾಗೂ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದರು. ನವಲಗುಂದ ವಿಧಾನಸಭಾ ಕ್ಷೇತ್ರ ಬಂಡಾಯದ ನೆಲವಾಗಿದ್ದು, ನಮ್ಮ ತಾಳ್ಮೆ ಪರೀಕ್ಷಿಸಬೇಡಿ ಎಂದು ಮುನೇನಕೊಪ್ಪ ಪರೋಕ್ಷವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಗುರು ಹಿರಿಯರು,
ಕಾರ್ಯಕರ್ತರು, ಯುವಕರು, ಸಮಸ್ತ್ ರೈತ ಬಾಂಧವರು
ಉಪಸ್ಥಿತರಿದ್ದರು.

