ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಅಟ್ಟಹಾಸ: ನಾಗಮಲೆ ಹಾದಿಯಲ್ಲಿ ಬೆಂಗಳೂರಿನ ಬಾಲಕ ಬಲಿ

Spread the love

ಹನೂರು: ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ತೆರಳುವ ಕಾಲುನಡಿಗೆ ಮಾರ್ಗದಲ್ಲಿ ಚಿರತೆಯೊಂದು ದಾಳಿ ನಡೆಸಿದ್ದು, ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ಎಂಬಾತ ದುರ್ಮರಣಕ್ಕೀಡಾಗಿದ್ದಾನೆ. ದೇವರ ದರ್ಶನದ ಹಂಬಲ ಹೊತ್ತು ಬಂದಿದ್ದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಭಕ್ತರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

​ಬೆಂಗಳೂರಿನಿಂದ ಕುಟುಂಬದವರೊಂದಿಗೆ ಬೆಟ್ಟಕ್ಕೆ ಬಂದಿದ್ದ ಹರ್ಷಿತ್, ನಾಗಮಲೆಯತ್ತ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹಠಾತ್ತಾಗಿ ದಾಳಿ ಮಾಡಿದ ಚಿರತೆಯು ಬಾಲಕನನ್ನು ಎಳೆದುಕೊಂಡು ಹೋಗಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆಯು ಯಾತ್ರಾರ್ಥಿಗಳಲ್ಲಿ ಭೀತಿ ಸೃಷ್ಟಿಸಿದ್ದು, ಅರಣ್ಯ ಇಲಾಖೆ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

​ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಯಾತ್ರಾ ಮಾರ್ಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೂ, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ. ನಾಗಮಲೆಯಂತಹ ಸೂಕ್ಷ್ಮ ಕಾಲುನಡಿಗೆ ಹಾದಿಗಳಲ್ಲಿ ಸಿಸಿಟಿವಿ ಅಳವಡಿಕೆ, ಹೆಚ್ಚಿನ ಅರಣ್ಯ ಸಿಬ್ಬಂದಿ ನಿಯೋಜನೆ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ. ಒಂದು ಅಮಾಯಕ ಜೀವ ಬಲಿಯಾದ ನಂತರವಷ್ಟೇ ಇಲಾಖೆಯು ಎಚ್ಚೆತ್ತುಕೊಳ್ಳುತ್ತಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

​ಮೃತ ಬಾಲಕನ ಕುಟುಂಬಕ್ಕೆ ಸರ್ಕಾರವು ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಹಾಗೂ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸುರಕ್ಷತೆಗಾಗಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಕ್ತಾದಿಗಳು ಒತ್ತಾಯಿಸಿದ್ದಾರೆ. ಇನ್ನು ಮುಂದಾದರೂ ಇಲಾಖೆಗಳು ಎಚ್ಚೆತ್ತುಕೊಂಡು ಯಾತ್ರಾರ್ಥಿಗಳ ಜೀವ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕಿದೆ.

ವರದಿ: ಕಾರ್ತಿಕ್ ಗೌಡ, ಹನೂರು.

Leave a Reply

Your email address will not be published. Required fields are marked *