ಗದಗ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೋರ್ ಮುರಿದು ಬಿದ್ದು 21 ಜನರಿಗೆ ಗಾಯ,ಏಳು ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

Spread the love

ಗದಗ: ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಪ್ರಸಿದ್ಧ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ‘ಡ್ಯಾನ್ಸಿಂಗ್ ಫ್ಲೋರ್’ ಮನರಂಜನಾ ಯಂತ್ರವು ಚಾಲನೆಯಲ್ಲಿ ಇದ್ದಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದ ಪರಿಣಾಮ 21 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾತ್ರಾ ಕಮಿಟಿ ಅಧ್ಯಕ್ಷರು ಸೇರಿದಂತೆ ಒಟ್ಟು 7 ಜನರ ಮೇಲೆ ಸೋಮವಾರ ಶಹರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

​ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮನರಂಜನಾ ಯಂತ್ರವು ವೇಗವಾಗಿ ತಿರುಗುತ್ತಿದ್ದಾಗ ಅದರ ಕಬ್ಬಿಣದ ಸಲಾಕೆಗಳು ಹಾಗೂ ಪಾರ್ಶ್ವದ ಭಾಗಗಳು ಇದ್ದಕ್ಕಿದ್ದಂತೆ ಮುರಿದಿವೆ. ಇದರ ಪರಿಣಾಮವಾಗಿ ಯಂತ್ರದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ತೀವ್ರ ಸ್ವರೂಪದ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 6 ವರ್ಷದ ಮಗು ಸೇರಿದಂತೆ ಮಹಿಳೆಯರು ಮತ್ತು ವಯಸ್ಕರು ಇದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಗಾಯಾಳುಗಳ ವಿವರ:

ಘಟನೆಯಲ್ಲಿ ಜಹೀರ ಅಹ್ಮದ್ ಖಾಜಿ (42), ಕಲಂದರ ಖಾಜಿ (15), ಶಿಫಾ ಖಾಜಿ (16), ಸಮೀನಾ ಗಂಗಾವತಿ (18), ಸನಾ ಖಾಜಿ (15), ಸಗುಪ್ತಾ ಖಾಜಿ (14), ಜ್ಯೋತಿ ಗಬ್ಯೂರ (18), ನಾಜಿಯಾ ತೋಟಿಗಾರ (20), ಕಿರಣ ಹುಲ್ಲೂರ (25), ದೀಪಕ ಹುಬ್ಬಳ್ಳಿ (29), ರಾಜೇಸಾಬ ಅಣ್ಣಿಗೇರಿ (23), ಸುಮನ್ ನವಲಗುಂದ (28), ವಿಶಾಲ ನವಲಗುಂದ (6), ಸಲ್ಮಾ ಹಂದೂರ (17), ಖುಷಿ ದಲಬಂಜನ (14), ಕಿರಣ ಕಬಾಡಿ (21), ಮಾಹೀನ್ ಕಂದಗಲ್ (10), ರುಬಿನಾ ಕಂದಗಲ್ (36), ಮುಸ್ತಾಕ ಹಳೆಮನಿ (25), ಪ್ರದೀಪಕುಮಾರ ಕಮ್ಮಾರ (25) ಹಾಗೂ ಸತೀಶ ಗಟ್ಟೂರ (22) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಳು ಜನರ ವಿರುದ್ಧ ಕ್ರಿಮಿನಲ್ ಕೇಸ್:

ಘಟನೆಗೆ ಸಂಬಂಧಿಸಿದಂತೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರಾ ಕಮಿಟಿ ಅಧ್ಯಕ್ಷ ವಿನಾಯಕ ಮಾನ್ವಿ, ತೋಂಟದಾರ್ಯ ಮಠದ ಮ್ಯಾನೇಜರ್ ಎಂ.ಎಸ್. ಅಂಗಡಿ, ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ ಹಾಗೂ ಮಲ್ಲು ಬಾದನ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

​ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೋಮವಾರ ಘಟನಾ ಸ್ಥಳದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಸಂಭ್ರಮದ ಜಾತ್ರೆಯಲ್ಲಿ ಇಂತಹ ಅಹಿತಕರ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಬೇಸರ ಮೂಡಿಸಿದೆ.

Leave a Reply

Your email address will not be published. Required fields are marked *