
ಧಾರವಾಡ: ಪೊಲೀಸರ ಕಿರುಕುಳ ಹಾಗೂ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವ ಬೆದರಿಕೆಯಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಮನಕಲುಕುವ ಘಟನೆ ಜಿಲ್ಲೆಯ ಗಿರಿನಗರದಲ್ಲಿ ನಡೆದಿದೆ. ನಗರದ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ಆದಿತ್ಯ ಮ್ಯಾಗೇರಿ ಎಂಬಾತನೇ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ದುರ್ದೈವಿ.
ಕಳೆದ ಶನಿವಾರ ವಿದ್ಯಾಗಿರಿ ಪೊಲೀಸರು ಕಾರ್ಯಾಚರಣೆ ನಡೆಸಿ ಆದಿತ್ಯ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಯುವಕರನ್ನು ಗಾಂಜಾ ಸೇವನೆಯ ಶಂಕೆಯ ಮೇಲೆ ವಶಕ್ಕೆ ಪಡೆದಿದ್ದರು. ಈ ವೇಳೆ ಆದಿತ್ಯನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿಲ್ಲ ಎಂಬ ‘ನೆಗೆಟಿವ್’ ವರದಿ ಬಂದಿತ್ತು. ಆದರೂ ಪೊಲೀಸರು ಆತನನ್ನು ಬಿಡದೆ ಹಣಕ್ಕಾಗಿ ಪೀಡಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೊದಲಿಗೆ 10 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದ ಪೊಲೀಸರು, ಅಂತಿಮವಾಗಿ ಆದಿತ್ಯನಿಂದ 2 ಸಾವಿರ ರೂಪಾಯಿ ಪಡೆದು ಕಳುಹಿಸಿದ್ದರು ಎನ್ನಲಾಗಿದೆ.

ತಾನು ಯಾವುದೇ ತಪ್ಪು ಮಾಡದಿದ್ದರೂ ಪೊಲೀಸ್ ಠಾಣೆ ಮೆಟ್ಟಿಲೇರಬೇಕಾಯಿತು ಮತ್ತು ಸಮಾಜದಲ್ಲಿ ಮರ್ಯಾದೆ ಹೋಯಿತು ಎಂಬ ತೀವ್ರ ನೋವಿನಿಂದ ಆದಿತ್ಯ ಈ ನಿರ್ಧಾರ ಕೈಗೊಂಡಿದ್ದಾನೆ. ಮಗನ ಸಾವಿನಿಂದ ಕಂಗಾಲಾದ ತಾಯಿ ಶವಗಾರದ ಮುಂದೆ ಆಕ್ರಂದನ ಮಾಡುತ್ತಾ, ತನ್ನ ಮಗನ ಸಾವಿಗೆ ಪೊಲೀಸರೇ ನೇರ ಕಾರಣ ಎಂದು ದೂರಿದ್ದಾರೆ.
ಕೇವಲ ಆದಿತ್ಯ ಮಾತ್ರವಲ್ಲದೆ, ಅಂದು ವಶಕ್ಕೆ ಪಡೆಯಲಾಗಿದ್ದ ಇತರ ಯುವಕರಿಂದಲೂ ಪೊಲೀಸರು ಭಾರೀ ಪ್ರಮಾಣದ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಗಾಂಜಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರಿಂದ 25 ರಿಂದ 30 ಸಾವಿರ ರೂಪಾಯಿಗಳವರೆಗೆ ಫೋನ್ ಪೇ ಅಥವಾ ಮೂರನೇ ವ್ಯಕ್ತಿಗಳ ಮೂಲಕ ಪೊಲೀಸರು ಹಣ ಪಡೆದಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಣ ನೀಡದಿದ್ದರೆ ಬೇರೆ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತರ ಪೋಷಕರು ಗಂಭೀರವಾಗಿ ದೂರುತ್ತಿದ್ದಾರೆ. ಸುಲಿಗೆ ಹಾಗೂ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ

