ಮುಂಡಗೋಡ ಮೀಟರ್ ಬಡ್ಡಿ ಕಿಂಗ್‌ಪಿನ್ ಹತ್ಯೆ ರಹಸ್ಯ ಬಯಲು: ಐವರು ಸುಪಾರಿ ಹಂತಕರ ಬಂಧನ, ಪಿಸ್ತೂಲ್ ವಶ

Spread the love

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಸಂಚಲನ ಮೂಡಿಸಿದ್ದ ಮೀಟರ್ ಬಡ್ಡಿ ದಂಧೆಯ ಕಿಂಗ್‌ಪಿನ್ ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣದ ಸುರುಳಿ ಬಿಚ್ಚಿಕೊಂಡಿದೆ. ಬಡ್ಡಿ ದಂಧೆಯ ವೃತ್ತಿ ವೈಷಮ್ಯಕ್ಕಾಗಿ ಸುಪಾರಿ ನೀಡಿ ಈ ಹತ್ಯೆ ಮಾಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನ ನೆಲಮಂಗಲದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಮುಂಡಗೋಡಿನ ನಿವಾಸಿ ಮಂಜುನಾಥ ಕಾಜಗಾರ ಅಲಿಯಾಸ್ ಮಂಜ್ಯಾ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಮಂಜುನಾಥ ಹಾಗೂ ಮೃತ ಜಮೀರ್ ಅಹ್ಮದ್ ನಡುವೆ ಮೀಟರ್ ಬಡ್ಡಿ ವ್ಯವಹಾರದ ಹಣಕಾಸಿನ ವಿಚಾರವಾಗಿ ತೀವ್ರ ಮನಸ್ತಾಪ ಉಂಟಾಗಿತ್ತು. ಜಮೀರ್ ನೀಡುತ್ತಿದ್ದ ಕಿರುಕುಳದಿಂದಾಗಿ ಮಂಜುನಾಥ ಊರು ಬಿಟ್ಟು ಹುಬ್ಬಳ್ಳಿಗೆ ವಲಸೆ ಹೋಗಿದ್ದರೂ ಹಗೆತನ ಮಾತ್ರ ಕಡಿಮೆಯಾಗಿರಲಿಲ್ಲ. ಜಮೀರ್‌ನ ದರ್ಪ ಹಾಗೂ ದಂಧೆಯ ಪೈಪೋಟಿಯಿಂದಾಗಿ ಆತನನ್ನು ಮುಗಿಸಲು ಸಂಚು ರೂಪಿಸಿದ ಮಂಜುನಾಥ, ಇತರ ನಾಲ್ವರಿಗೆ ಸುಪಾರಿ ನೀಡಿ ಈ ಕೃತ್ಯ ಎಸಗಿದ್ದಾನೆ.

​ಬಂಧಿತರನ್ನು ಮಂಜುನಾಥ ಕಾಜಗಾರ, ಶ್ರೀಕಾಂತ ಕಿರಣಗಿ, ಮಂಜುನಾಥ ಬೆಳಗಾಂವ, ಅಭಿಷೇಕ ಬದಶೆಟ್ಟಿ ಮತ್ತು ದೀಪಕ ನವಲೆ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಎರಡು ಬೈಕ್ ಹಾಗೂ ಅತ್ಯಂತ ಅಪಾಯಕಾರಿ ಎನ್ನಲಾದ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಆರು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

​ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ. ನಾರಾಯಣ್ ಅವರ ವರ್ಗಾವಣೆಯ ಬಳಿಕ ಮುಂಡಗೋಡಿನಲ್ಲಿ ಮೀಟರ್ ಬಡ್ಡಿ ದಂಧೆಯ ಹಾವಳಿ ಮಿತಿಮೀರಿತ್ತು. ಜಮೀರ್ ಅಹ್ಮದ್ ಸುಮಾರು 300ಕ್ಕೂ ಹೆಚ್ಚು ಜನರ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಿಸಿ ಹಣ ವಸೂಲಿ ಮಾಡುತ್ತಿದ್ದುದು ಮಂಜುನಾಥನ ಹಗೆತನಕ್ಕೆ ತುಪ್ಪ ಸುರಿದಂತಾಗಿತ್ತು. ಹತ್ಯೆಯ ಬಳಿಕ ತಲೆಮರೆಸಿಕೊಂಡಿದ್ದ ಹಂತಕರನ್ನು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಬೆನ್ನಟ್ಟಿದ ಪೊಲೀಸರು ನೆಲಮಂಗಲದ ಬಳಿ ಸುತ್ತುವರಿದು ಸೆರೆಹಿಡಿದಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಮೀಟರ್ ಬಡ್ಡಿ ಜಾಲದ ಬೆನ್ನತ್ತಲು ಇಲಾಖೆ ನಿರ್ಧರಿಸಿದೆ.

Leave a Reply

Your email address will not be published. Required fields are marked *